ರಾಜ್ಯದಲ್ಲಿ ಸನ್ಸೇರಾ ಕಂಪೆನಿಯಿಂದ 2,100 ಕೋಟಿ ರೂ.ಹೂಡಿಕೆ | 3,500 ಉದ್ಯೋಗ ಸೃಷ್ಟಿ : ಎಂ.ಬಿ.ಪಾಟೀಲ್
ಬೆಂಗಳೂರು : ವಾಹನಗಳ ಮತ್ತು ವೈಮಾನಿಕ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪೆನಿಯು ರಾಜ್ಯದಲ್ಲಿ 2,100 ಕೋಟಿ ರೂ.ಹೂಡಲಿದೆ. ಇದರಿಂದ 3500 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಬುಧವಾರ ನಗರದ ರೇಸ್ಕೋರ್ಸ್ ರಸ್ತೆಯಲಿರುವ ಖನಿಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಸನ್ಸೇರಾ ಕಂಪೆನಿಯ ಸಿಇಒ ಶೇಖರ್ ವಾಸನ್, ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 3,500 ಉದ್ಯೋಗಗಳು ಸೃಷ್ಟಿ ಆಗಲಿವೆ. ಕಂಪೆನಿಯು ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 55 ಎಕರೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಅನುಕೂಲ ಆಗಲಿದೆ ಎಂದರು.
ಸನ್ಸೇರಾ ಕಂಪೆನಿಯು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಕೇಂದ್ರ ಆರಂಭಿಸಲಿದ್ದು, ಇದರಿಂದ ಸ್ಥಳೀಯರ ಕೌಶಲ ವೃದ್ಧಿಯಾಗಲಿದೆ. ಈ ಕಂಪನಿಯು ದೇಶದಲ್ಲಿ 16 ತಯಾರಿಕಾ ಘಟಕಗಳನ್ನು ಹೊಂದಿದ್ದು, ಅವುಗಳ ಪೈಕಿ 12 ಘಟಕಗಳು ರಾಜ್ಯದಲ್ಲೇ ಇವೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕಂಪೆನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್.ಆರ್.ಸಿಂಘ್ವಿ, ಕಾರ್ಯದರ್ಶಿ ರಾಜೇಶ್ ಮೋದಿ ಉಪಸ್ಥಿತರಿದ್ದರು.
ಓಟಿಸ್ ಕಂಪೆನಿಯಿಂದ 135 ಕೋಟಿ ರೂ.ಹೂಡಿಕೆ: ಎಲಿವೇಟರುಗಳನ್ನು ತಯಾರಿಸುವ ಓಟಿಸ್ ಕಂಪೆನಿ ಕೂಡ ರಾಜ್ಯದಲ್ಲಿ 135 ಕೋಟಿ ರೂಪಾಯಿ ಹೂಡಲು ಒಲವು ವ್ಯಕ್ತಪಡಿಸಿದೆ. ಈ ಸಂಬಂಧ ಕಂಪೆನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಲಾಗಿದೆ. ಇದಕ್ಕಾಗಿ ಕಂಪೆನಿಯು ಹಾರೋಹಳ್ಳಿಯಲ್ಲಿ 12 ಎಕರೆ ಭೂಮಿಯನ್ನು ಕೇಳಿದ್ದು, ಇದನ್ನು ಒದಗಿಸಲಾಗುವುದು. ಇದರಿಂದ 200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ.
-ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ