ಪೂರ್ವಪ್ರಾಥಮಿಕ ಶಾಲೆ ಆರಂಭಿಸಲು 250 ಅಂಗನವಾಡಿಗಳು ಆಯ್ಕೆ,ಸೋಮವಾರ ವಿದ್ಯುಕ್ತ ಚಾಲನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ಮೊದಲ ಹಂತದಲ್ಲಿ ಬೆಂಗಳೂರಿನ 250 ಅಂಗನವಾಡಿಗಳನ್ನು ಗುರುತಿಸಿದ್ದು, ಹಂತಹಂತವಾಗಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಎಲ್ ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೊರೆತ ತಾತ್ವಿಕ ಒಪ್ಪಿಗೆ ಮೇರೆಗೆ ಹಂತ-ಹಂತವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿಯೂ ಪೂರ್ವ ಪ್ರಾಥಮಿಕ (LKG & UKG) ಗಳನ್ನು ಪ್ರಾರಂಭಿಸಲು ಆದೇಶಿಸಲಾಗಿದೆ. ಅದರಂತೆ, ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (LKG & UKG) ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ಉತ್ತರ ಜಿಲ್ಲೆಯ 62, ಪೂರ್ವ ಜಿಲ್ಲೆಯ 20, ಕೇಂದ್ರ ಜಿಲ್ಲೆಯ 50, ಬೆಂಗಳೂರು ರಾಜ್ಯ (ಪ್ರೊಜೆಕ್ಟ್) 50, ಬೆಂಗಳೂರು ದಕ್ಷಿಣ 48, ಆನೆಕಲ್ 20 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, 1,238 ಗಂಡು ಹಾಗೂ 1,203 ಹೆಣ್ಣು ಮಕ್ಕಳು ಸೇರಿ ಒಟ್ಟು 2,441 ಮಕ್ಕಳು ಇದರಲ್ಲಿ ಒಳಗೊಳ್ಳಲಿದ್ದಾರೆ.
04 ರಿಂದ 06 ವರ್ಷದ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಪಠ್ಯ, ಪುಸ್ತಕ (ಆಂಗ್ಲ ಹಾಗೂ ಕನ್ನಡ ಮಾಧ್ಯಮ) ನೀಡಲು, 1 ಜೊತೆ ಸಮವಸ್ತ್ರ ನೀಡಲು, 1 ಬ್ಯಾಗ್ ಮತ್ತು ಪೆನ್ಸಿಲ್ ಬಾಕ್ಸ್ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಸಿಎಸ್ಆರ್ ಫಂಡ್ ಪಡೆಯಲು ಉದ್ದೇಶಿಸಲಾಗಿದೆ. LKG & UKG-ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ಪ್ರತಿ ದಿನ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಪೂರ್ವ ಪ್ರಾಥಮಿಕ ಕೇಂದ್ರಗಳಲ್ಲಿ ಹಾಲಿ PUC ಮತ್ತು ಪದವಿ / ಸ್ನಾತಕೋತ್ರದ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ಈಗಾಗಲೇ ಅಗತ್ಯ ತರಬೇತಿ ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮಾತ್ರ ಬೋಧನೆ ಮಾಡಲು ಗುರುತಿಸಲಾಗಿದೆ. ಆಂಗ್ಲ ಹಾಗೂ ಕನ್ನಡ ಮಾಧ್ಯಮಗಳಲ್ಲಿ ಬೋಧನೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ಸೋಮವಾರ, ಜುಲೈ 22ರಿಂದ 250 ಅಂಗನವಾಡಿ ಕೇಂದ್ರಗಳಲ್ಲಿ LKG & UKG ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.