ದ್ವಿತೀಯ ಪಿಯುಸಿ 2ರ ಫಲಿತಾಂಶ ಪ್ರಕಟ : ಶೇ.35.25ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಸಾಂದರ್ಭಿಕ ಚಿತ್ರ
ಬೆಂಗಳೂರು : 2023-24ನೆ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಕೇವಲ ಶೇ.35.25 ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಎಂದಿನಂತೆ ದ್ವಿತೀಯ ಪಿಯುಸಿ ಪರೀಕ್ಷೆ-2ರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಎ.29ರಿಂದ ಮೇ 16ರ ವರೆಗೆ ರಾಜ್ಯದ 301 ಕೇಂದ್ರಗಳಲ್ಲಿ ನಡೆಸಲಾಗಿತ್ತು. ಮೇ 15ರಿಂದ ಮೇ 18 ರವರೆಗೆ 28 ಕೇಂದ್ರಗಳಲ್ಲಿ 7875 ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದು, ಮಂಗಳವಾರಂದು ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕಲಾ ವಿಭಾಗದಲ್ಲಿ ಶೇ.22.24, ವಾಣಿಜ್ಯ ವಿಭಾಗದಲ್ಲಿ ಶೇ.22.06 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.55.16ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ 1,49,824 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 1,48,942 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 52,505 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿ ಶೇ.35.25ರಷ್ಟು ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದ 84,632 ಬಾಲಕರಲ್ಲಿ 26,496 ಮಂದಿ ಉತ್ತೀರ್ಣರಾಗಿದ್ದು, ಶೇ.31.31ರಷ್ಟು ಫಲಿತಾಂಶ ಬಂದಿದೆ. 64,310 ವಿದ್ಯಾರ್ಥಿನಿಯರಲ್ಲಿ 26,009 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ.40.44 ರಷ್ಟು ಫಲಿತಾಂಶ ಬಂದಿದೆ.
ಮರು ಮೌಲ್ಯಮಾಪನ: ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 23 ಕಡೆಯ ದಿನವಾಗಿದ್ದು, ಶುಲ್ಕ ಪಾವತಿ ಮಾಡಿದವರು ಮೇ 22 ರಿಂದ 24 ರವರೆಗೆ ಉತ್ತರ ಪತ್ರಿಕೆ ಪ್ರತಿಗಳ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಸ್ಕ್ಯಾನ್ ಪ್ರತಿ ಪಡೆಯಲು 530 ರೂ. ಹಾಗೂ ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರೂ.ಗಳ ಶುಲ್ಕ ನಿಗದಿಪಡಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಮೇ 23ರಿಂದ 28ರವರೆಗೆ ಅವಕಾಶ ನೀಡಿದ್ದು, ದಂಡದೊಂದಿಗೆ ಶುಲ್ಕ ಪಾವತಿಗೆ ಮೇ 29ರಿಂದ ಮೇ 30ರವರೆಗೆ ಅವಕಾಶವಿದೆ. ಪರೀಕ್ಷೆ-3ಕ್ಕೆ ಅರ್ಜಿ ಸಲ್ಲಿಕೆ ಮಾಡಲು ಮರು ಮೌಲ್ಯಮಾಪನದ ಫಲಿತಾಂಶಕ್ಕೆ ಕಾಯದೇ ಅರ್ಜಿ ಸಲ್ಲಿಸಬಹುದಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-3 ವೇಳಾಪಟ್ಟಿ: ದ್ವಿತೀಯ ಪಿಯುಸಿ ಪರೀಕ್ಷೆ-3 ಪ್ರಕಟವಾಗಿದ್ದು, ಜೂ.24ರಿಂದ ಜು.5ರವರೆಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಜೂ.24ರಂದು ಕನ್ನಡ, ಅರೇಬಿಕ್, ಜೂ.25ರಂದು ಇಂಗ್ಲಿಷ್, ಜೂ.26ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ, ಜೂ.27ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಜೂ.28ರಂದು ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಜೂ.29ರಂದು ಇತಿಹಾಸ, ಭೌತಶಾಸ್ತ್ರ, ಜು.1ರಂದು ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜು.2ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ, ಜು.3ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ, ಜು.4ರಂದು ಹಿಂದಿ, ಜು.5ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಪ್ರೆಂಚ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ.