ವನ್ಯಜೀವಿ ಅಂಗಾಂಗ ಮರಳಿಸಲು ಮತ್ತೆ 3 ತಿಂಗಳ ಕಾಲಾವಕಾಶ: ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ಹುಲಿ, ಚಿರತೆ ಉಗುರು, ಜಿಂಕೆ ಕೊಂಬು, ಆನೆ ದಂತ, ಕೂದಲು ಇತ್ಯಾದಿ ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿರುವು ಹಾಗೂ ವನ್ಯಜೀವಿ ಮಾಂಸ ಭಕ್ಷಣೆ ಅಪರಾಧವಾಗಿದ್ದು, ಜ.16ರಿಂದ 3 ತಿಂಗಳ ಕಾಲ ಈ ವಸ್ತುಗಳನ್ನು ಹತ್ತಿರದ ಅರಣ್ಯ ಇಲಾಖೆಯ ಕಚೇರಿಗೆ ಮರಳಿಸಬಹುದು. ಆನಂತರ ಇಲಾಖೆ ವತಿಯಿಂದ ಸ್ವೀಕೃತಿ ನೀಡಲಾಗುವುದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1978ರಲ್ಲಿ ಮತ್ತು 2003ರಲ್ಲಿ ಈ ವಸ್ತುಗಳಿದ್ದರೆ ಘೋಷಣೆ ಮಾಡಿ ಹಕ್ಕು ಪ್ರಮಾಣ ಪತ್ರ ಪಡೆಯಲು ಅವಕಾಶ ನೀಡಲಾಗಿತ್ತು. ಆಗ ಘೋಷಣೆ ಮಾಡಿಕೊಳ್ಳದೆ ಕೆಲವರು ವಿವಿಧ ವನ್ಯಜೀವಿ ಅಂಗಾಂಗದ ಟ್ರೋಫಿ, ಕೊಂಬು ಇತ್ಯಾದಿ ಹೊಂದಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದರು.
ಕಾಯ್ದೆಯ ಅರಿವಿಲ್ಲದೆ ಮುಗ್ಧ ಜನರು ಸಂಕಷ್ಟಕ್ಕೆ ಸಿಲುಕಬಾರದು ಎಂದು ಈಗ ಒಂದು ಬಾರಿಯ ಅವಕಾಶ ನೀಡಲು ತೀರ್ಮಾನಿಸಲಾಗಿದ್ದು, ಇವುಗಳನ್ನು ಸರಕಾರಕ್ಕೆ ಮರಳಿಸಲು ಅವಕಾಶ ಕಲ್ಪಿಸಲಾಗಿದೆ. ಸರಕಾರ ನೀಡಿರುವ ಗಡುವಿನ ನಂತರ ಯಾರೇ ಇಂತಹ ವನ್ಯಜೀವಿ ಅಂಗಾಂಗದ ಆಭರಣ ಧರಿಸಿದರೆ, ಮನೆಗಳಲ್ಲಿ ಅಘೋಷಿತ ಅಂಗಾಂಗ, ಇತ್ಯಾದಿ ಹೊಂದಿದ್ದರೆ ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಹೀಗಾಗಿ ಎಲ್ಲರೂ ಒಂದು ಬಾರಿಯ ಅವಕಾಶ ಬಳಸಿಕೊಳ್ಳುವಂತೆ ಮನವಿ ಮಾಡಿದರು.