ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ 30,432 ಕೋಟಿ ರೂ.ನಷ್ಟ: ಸಚಿವ ಎಚ್.ಕೆ.ಪಾಟೀಲ್
ʼʼಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಂಪುಟ ನಿರ್ಧಾರʼʼ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.22: ರಾಜ್ಯದಲ್ಲಿನ 195 ತಾಲೂಕುಗಳಲ್ಲಿ ಬರಪರಿಸ್ಥಿತಿಯಿಂದಾಗಿ ಅಂದಾಜು 30,432 ಕೋಟಿ ರೂ.ನಷ್ಟವಾಗಿದ್ದು, ಎನ್ಡಿಆರ್ಎಫ್ ನಿಯಮಾವಳಿಗಳ ಅನುಸಾರ 4860.13 ಕೋಟಿ ರೂ.ಪರಿಹಾರ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 30,432 ಕೋಟಿ ರೂ.ಗಳಲ್ಲಿ ಕೃಷಿ ಬೆಳೆ ನಷ್ಟದ ಪ್ರಮಾಣ 27,867.17 ಕೋಟಿ ರೂ.ಗಳಷ್ಟಿದೆ. ಅಂದಾಜು 39.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟವಾಗಿದೆ. 1.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 2565 ಕೋಟಿ ರೂ.ಗಳಷ್ಟು ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದರು.
ಕೃಷಿ ಬೆಳೆ ನಷ್ಟಕ್ಕೆ 3824.67 ಕೋಟಿ ರೂ., ತೋಟಗಾರಿಕೆ ಬೆಳೆ ನಷ್ಟಕ್ಕೆ 206.39 ಕೋಟಿ ರೂ., 195 ಪಶು ಶಿಬಿರಗಳ ಸ್ಥಾಪನೆಗೆ 104.33 ಕೋಟಿ ರೂ., ಔಷಧಗಳಿಗೆ 25 ಕೋಟಿ ರೂ., ಮೇವು ಬೀಜ ವಿತರಣೆಗೆ 50 ಕೋಟಿ ರೂ., 175 ಗ್ರಾಮೀಣ ತಾಲೂಕುಗಳಲ್ಲಿ 180 ದಿನಗಳವರೆಗೆ ಕುಡಿಯುವ ನೀರು ಸರಬರಾಜು ಮಾಡಲು 284.4 ಕೋಟಿ ರೂ., ನಗರ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡಲು 213 ಕೋಟಿ ರೂ.ಗಳನ್ನು ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರು 3ನೆ ಹಂತದ ವಿಸ್ತರಣಾ ಯೋಜನೆಯ ಕಾಮಗಾರಿಗಳ 49.50 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ 6 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವವರಿಗೆ ಮಾಸಿಕ 67,500 ರೂ. ಹಾಗೂ ಸದಸ್ಯರಿಗೆ 61,500 ರೂ.ಪಿಂಚಣಿ ನೀಡಲು ಒಪ್ಪಿಗೆ ನೀಡಲಾಗಿದೆ. ಕಾನೂನು ಮಾಪನ ಶಾಸ್ತ್ರ ಇಲಾಖೆ ಜಾರಿಗೆ ತಂದಿರುವ ನಿಯಮಾವಳಿಗೆ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕ ವಿತರಿಸುವ ಆಶಾಕಿರಣ ಯೋಜನೆಯನ್ನು ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು 29.16 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ 67.62 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಯಾಣಿಕ ಸೇವಾ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದು, ಅದಕ್ಕೆ ಘಟನೋತ್ತರ ಅನಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಧಾರವಾಡದ ಕೃಷಿ ವಿವಿಗೆ ಸೇರಿದ ಸೈದಾಪುರದಲ್ಲಿರುವ 45.19 ಎಕರೆ ಜಮೀನನ್ನು ಕೇಂದ್ರ ಸರಕಾರಕ್ಕೆ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಗುತ್ತಿಗೆ ಆಧಾರದಲ್ಲಿ ನೀಡಲು ಅನುಮೋದನೆ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹಾಗೂ ನವೋದ್ಯಮ ಸ್ಥಾಪಿಸಲು ಉತ್ತೇಜನ ನೀಡಲು 10 ಕೋಟಿ ರೂ.ಗಳನ್ನು ಮಂಜೂರು ಮಾಡಲು ಅನಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸ್ಕ್ರಾಪಿಂಗ್ ಪಾಲಿಸಿ: ಕೇಂದ್ರ ಸರಕಾರವು 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರಾಪ್ ಮಾಡಲ ನೀತಿ ತಂದಿದೆ. ಅದರಂತೆ, ರಾಜ್ಯ ಸರಕಾರದ 15,295 ವಾಹನಗಳನ್ನು ಹಂತ ಹಂತವಾಗಿ ಸ್ಕ್ರಾಪ್ ಮಾಡಲಾಗುವುದು. 2023-24ನೆ ಸಾಲಿನಲ್ಲಿ 5 ಸಾವಿರ ವಾಹನಗಳನ್ನು ಸ್ಕ್ರಾಪ್ ಮಾಡಲು ನಿರ್ಧರಿಸಲಾಗಿದೆ. ಪ್ರತಿಯೊಂದು ವಾಹನಕ್ಕೂ 10 ಲಕ್ಷ ರೂ.ವೆಚ್ಚವಾಗುತ್ತದೆ. ಅದರಂತೆ 5 ಸಾವಿರ ವಾಹನಗಳಿಗೆ 500 ಕೋಟಿ ರೂ.ಬೇಕಾಗುತ್ತದೆ. ಕೇಂದ್ರ ಸರಕಾರದಿಂದ ಇದಕ್ಕೆ 100 ಕೋಟಿ ರೂ.ಪ್ರೋತ್ಸಾಹ ಧನ ಸಿಗುತ್ತದೆ. ಪೊಲೀಸ್ ಇಲಾಖೆಗೆ ಹೊಸ ವಾಹನಗಳನ್ನು ಖರೀದಿಸಲು 100 ಕೋಟಿ ರೂ.ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.