3,300 ಕೋಟಿ ರೂ. ಹೂಡಿಕೆಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಜೊತೆ ಸರಕಾರದ ಒಪ್ಪಂದ
Photo : auto.economictimes.indiatimes.com
ಬೆಂಗಳೂರು, ನ.21: ಜಪಾನ್ ನ ಟೊಯೊಟಾ ಮೋಟಾರ್ ಕಾರ್ಪೊರೇಶನ್ ಭಾರತದ ಅಂಗಸಂಸ್ಥೆಯಾಗಿರುವ ಆಟೊಮೊಬೈಲ್ ಕಂಪನಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್(ಟಿಕೆಎಂ) ಜೊತೆಗೆ ಕರ್ನಾಟಕ ಸರಕಾರ ಮಂಗಳವಾರ ತಿಳಿವಳಿಕೆ ಪತ್ರಕ್ಕೆ(ಎಂಒಯು) ಸಹಿ ಹಾಕಿದೆ.
ಈ ಒಪ್ಪಂದದ ಪ್ರಕಾರ ಟೊಯೊಟಾ ಬೆಂಗಳೂರು ಬಳಿಯ ಬಿಡದಿಯಲ್ಲಿ ಇರುವ ತನ್ನ ಕಾರು ತಯಾರಿಕಾ ಸ್ಥಾವರದಲ್ಲಿ ಮೂರನೇ ಘಟಕವನ್ನು ಸ್ಥಾಪಿಸಲು ಯೋಜಿಸಿದ್ದು, 3,300 ಕೋಟಿ ರೂ. ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿದೆ. ಈ ಘಟಕವು ವರ್ಷಕ್ಕೆ 1,00,000 ವಾಹನಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿರಲಿದೆ. ಈ ವಿಸ್ತರಣೆಯ ಫಲವಾಗಿ 2000 ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಲಿವೆ.
ಈ ಒಪ್ಪಂದ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಸಕಾಜು ಯೋಶಿಮುರಾ ಅವರೊಂದಿಗೆ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್, ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ಕಿರ್ಲೋಸ್ಕರ್ ಉಪಸ್ಥಿತರಿದ್ದರು.