ರಾಜ್ಯದಲ್ಲಿ ಶೇ.36ರಷ್ಟು ಮಳೆ ಕೊರತೆ: ಸಚಿವ ಚಲುವರಾಯಸ್ವಾಮಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.17: ಪ್ರಸಕ್ತ ಸಾಲಿನ ಮುಂಗಾರು ಪ್ರವೇಶವು ಸುಮಾರು 10 ದಿನಗಳಷ್ಟು ತಡವಾಗಿ ಪ್ರವೇಶವಾಗಿದ್ದು, ರಾಜ್ಯಾದ್ಯಂತ ನೈರುತ್ಯ ಮುಂಗಾರು ಮಳೆಯು 166 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.36ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಪರಿಷತ್ತಿನಲ್ಲಿ ನಿಯಮ72ರಡಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕರ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕ ಜಿಲ್ಲೆಗಳಾದ ಬಾಗಲಕೋಟೆ, ಬಳ್ಳಾರಿ, ಬೀದರ್, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲುಬುರ್ಗಿ, ಕೊಪ್ಪಳ, ರಾಯಚೂರು, ವಿಜಯನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ 76 ಮಿ.ಮೀ. ಮಳೆಯಾಗಿದ್ದು, ಶೇ.39ರಷ್ಟು ಮಳೆ ಕೊರತೆಯಾಗಿದೆ ಎಂದರು.
ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 82.35 ಹೆಕ್ಟರ್ ವಿಸ್ತೀರ್ಣದಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹಮ್ಮಿಕೊಳ್ಳಲಾಗಿದೆ. ಜುಲೈ ಮೊದಲ ವಾರದತನಕ 26.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ವರ್ಷ 20.60 ಲಕ್ಷ ಹೆಕ್ಟೇರ್ ಬಿತ್ತನೆಯಾಗಿರುತ್ತದೆ. ಈ ಜಿಲ್ಲೆಗಳಲ್ಲಿ ಮುಸುಕಿನ ಜೋಳ, ತೊಗರಿ, ಹತ್ತಿ, ಕಬ್ಬು, ಹೆಸರು, ಉದ್ದು, ಭತ್ತ, ಸೂರ್ಯಕಾಂತಿ ಶೆಂಗಾ ಬೆಳೆ ಬೆಳೆಯಲಾಗಿದೆ ಎಂದು ಅವರು ಹೇಳಿದರು.