4 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ನೀರಾವರಿ ಇಲಾಖೆ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ಜು.11: ಏತ ನೀರಾವರಿ ಯೋಜನೆಗಳ ವಿದ್ಯುತ್ ಬಿಲ್ ಸೇರಿದಂತೆ ನೀರಾವರಿ ಇಲಾಖೆ ಇಂಧನ ಇಲಾಖೆಗೆ ಸುಮಾರು 4 ಸಾವಿರ ಕೋಟಿ ರೂ. ವಿದ್ಯುತ್ ಬಿಲ್‍ನ್ನು ಬಾಕಿ ಉಳಿಸಿಕೊಂಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸುರೇಶ್‍ಗೌಡ ಅವರು ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿ ಪಂಪಸೆಟ್ ಕೆಟ್ಟು ಹೋಗುತ್ತಿದೆ. ಪರ್ಯಾಯ ಪಂಪ್‍ಸೆಟ್ ಮಾಡಿ ಬಾಕಿ ಇರುವ ವಿದ್ಯುತ್ ಬಿಲ್‍ನ್ನು ಕಟ್ಟಿ ಎಂದು ಸರಕಾರಕ್ಕೆ ಒತ್ತಾಯಿಸಿದಾಗ ಅವರು ಉತ್ತರಿಸಿದರು.
ನೀರಾವರಿ ಇಲಾಖೆ ಒಂದರಿಂದಲೇ ಇಂಧನ ಇಲಾಖೆಗೆ 4 ಸಾವಿರ ಕೋಟಿ ರೂ. ಬಾಕಿ ಇದೆ. ಈ ಹಿಂದೆ ನಾನು ಇಂಧನ ಸಚಿವನಾಗಿದ್ದಾಗ ಬಾಕಿ ಬಿಲ್ ಪಾವತಿಗೆ ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದೆ. ಈಗ ಕೆರೆಗಳನ್ನು ಮೀನುಗಾರಿಕೆಗೆ ಹರಾಜು ಮಾಡಿ ಆ ಹಣದಿಂದ ವಿದ್ಯುತ್ ಬಿಲ್‍ಗಳನ್ನು ತುಂಬುವಂತಹ ವ್ಯವಸ್ಥೆ ಜಾರಿ ಮಾಡುವುದಾಗಿ ಹೇಳಿದರು.
ಏತ ನೀರಾವರಿಯಿಂದ ಕೆರೆ ತುಂಬಿಸಿಕೊಳ್ಳುವ ರೈತರು ಯಾರೂ ಶುಲ್ಕ ನೀಡಲ್ಲ. ಗ್ರಾಮ ಪಂಚಾಯ್ತಿಗಳು ಬಿಲ್ ಕೊಡಲ್ಲ. ಹೀಗಾಗಿ ಇಂಧನ ಇಲಾಖೆಗೆ ಹಣ ಸಂದಾಯವಾಗುತ್ತಿಲ್ಲ. ಇದರಿಂದ ಇಂಧನ ಇಲಾಖೆಗೂ ಕಷ್ಟವಾಗುತ್ತದೆ. ಇದನ್ನೆಲ್ಲ ಗಮನಿಸಿಕೊಂಡು ಮುಂದಿನ ದಿನಗಳಲ್ಲಿ ಕೆರೆ ತುಂಬಿಸಿಕೊಳ್ಳುವ ಯೋಜನೆಯಡಿ ಮೀನುಗಾರಿಕೆಗೆ ಅವಕಾಶ ನೀಡಿ ಆ ಮೂಲಕ ಬರುವ ಹಣವನ್ನು ವಿದ್ಯುತ್ ಬಿಲ್ ತುಂಬಲು ಬಳಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗುವುದು ಎಂದು ಅವರು ಉಲ್ಲೇಖಿಸಿದರು.