ಶೇ.40 ಕಮಿಷನ್ ಆರೋಪ ಪ್ರಕರಣ | ಜೂನ್.7 ರಂದು ಕೋರ್ಟ್ಗೆ ಹಾಜರಾಗಲು ರಾಹುಲ್ ಗಾಂಧಿಗೆ ಸೂಚನೆ
ರಾಹುಲ್ ಗಾಂಧಿ | PTI
ಬೆಂಗಳೂರು: ಬಿಜೆಪಿ ವಿರುದ್ಧ ಶೇ.40 ಕಮಿಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೋರ್ಟ್ ವಿನಾಯಿತಿ ನೀಡಿದೆ.
ವಿಧಾನಸಭಾ ಚುನಾವಣೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿ ಪತ್ರಿಕಾ ಪ್ರಕಟಣೆ ನೀಡಲಾಗಿತ್ತು.ಇದರಿಂದ ಬಿಜೆಪಿ ಪಕ್ಷದ ಮಾನ ಹರಾಜು ಆಗಿದೆ ಎಂದು ಬಿಜೆಪಿಯ ಕೇಶವ್ ಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ದಾವೆ ವಿಚಾರಣೆ ನಡೆಸಿದ 42ನೇ ಎಸಿಎಂಎಂ ನ್ಯಾಯಾಲಯವು ಆರೋಪಿಗಳು ವಿಚಾರಣಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ರಾಹುಲ್ ಗಾಂಧಿ ಎರಡು ಬಾರಿ ವಿಚಾರಣೆಗೆ ಹಾಜರಾಗಲು ವಿನಾಯಿತಿ ಪಡೆದಿದ್ದರು. ಆದರೆ ಈಗ ಮೂರನೆಯ ಬಾರಿಗೆ ವಿನಾಯಿತಿ ನೀಡಲು ವಕೀಲ ಸೂರ್ಯ ಮನವಿ ಮಾಡಿದರು. ಇದಕ್ಕೆ ಬಿಜೆಪಿ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದರು.
ಆದರೆ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿಗೆ ವಿನಾಯಿತಿ ನೀಡಿ, ಜೂನ್.7 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.