ಕೇಂದ್ರದಿಂದ ತಗ್ಗಿದ 40 ಸಾವಿರ ಕೋಟಿ ಅನುದಾನ: ಸಚಿವ ಕೃಷ್ಣಭೈರೇಗೌಡ
ಸಚಿವ ಕೃಷ್ಣಬೈರೇಗೌಡ
ಬೆಳಗಾವಿ, (ಸುರ್ವಣ ವಿಧಾನಸೌಧ): ಐದು ವರ್ಷಗಳಿಂದ ಕೇಂದ್ರ ಸರಕಾರದ ಪುರಸ್ಕೃತ ಯೋಜನೆ ಮತ್ತು ಜಿಎಸ್ಟಿ ಪರಿಹಾರವಾಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿದ್ದ 40 ಸಾವಿರ ಕೋಟಿ ರೂ. ಅನುದಾನ ಕಡಿಮೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಗುರುವಾರ ಪರಿಷತ್ತಿನ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಉತ್ತರಿಸಿದ ಅವರು, ನಮ್ಮ ರಾಜ್ಯದ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ನಾವು ಕೇಂದ್ರ ಸರಕಾರಕ್ಕೆ ಸಲ್ಲಿಸುವ ತೆರಿಗೆ ಪಾಲು ಹೆಚ್ಚಳವಾಗಿದೆ. ಆದರೆ, ಬಜೆಟ್ ಗಾತ್ರಕ್ಕೆ ಹೋಲಿಕೆ ಮಾಡಿದರೆ, ಕೇಂದ್ರದಿಂದ 5 ವರ್ಷಗಳಲ್ಲಿ ಸುಮಾರು 40 ಸಾವಿರ ಕೋಟಿ ರೂ. ಅನುದಾನ ಕಡಿತವಾಗಿದೆ. ಇದರಿಂದ ನಮ್ಮ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಪುರಸ್ಕೃ ತ ಯೋಜನೆಯಿಂದ 20 ಸಾವಿರ ಕೋಟಿ ರೂ. ಹಾಗೂ ಜಿಎಸ್ಟಿ ಪರಿಹಾರವಾಗಿ 20 ಸಾವಿರ ಕೋಟಿ ರೂ. ರಾಜ್ಯಕ್ಕೆ ಬರಬೇಕು. ವರ್ಷದಿಂದ ವರ್ಷಕ್ಕೆ ಕೇಂದ್ರದ ತೆರಿಗೆ ಪಾಲು ಕಡಿಮೆಯಾಗುತ್ತಿದೆಯೇ ಹೊರತು, ಹೆಚ್ಚಳವಾಗುತ್ತಿಲ್ಲ. ನಮ್ಮ ಪಾಲು ಮಾತ್ರ ಹೆಚ್ಚಾಗುತ್ತಲೇ ಇದೆ. ಕೇಂದ್ರ ಸರಕಾರ ನಮಗೆ ಆರ್ಥಿಕ ವರ್ಷದ ಅವಧಿಯೊಳಗೆ ನಮ್ಮ ಪಾಲಿನ ಹಣವನ್ನು ಕೊಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಯು.ಬಿ.ವೆಂಕಟೇಶ್ ವಿಷಯ ಪ್ರಸ್ತಾಪಿಸಿ, ಮಹಾರಾಷ್ಟ್ರ ಹೊರತುಪಡಿಸಿದರೆ, ಅತಿ ಹೆಚ್ಚು ತೆರಿಗೆ ಕಟ್ಟುವವರು ನಾವು. ಆದರೆ, ನಮ್ಮ ಪಾಲಿನ ತೆರಿಗೆ ಹಣವನ್ನು ಕಟ್ಟಿಸಿಕೊಂಡು ನಮಗೆ ಸೂಕ್ತ ಅನುದಾನ ನೀಡುತ್ತಿಲ್ಲ ಎಂದರೆ ಹೇಗೆ? ನಿನ್ನನ್ನು ಮುದ್ದಾಗಿ ಸಾಕುತ್ತೇನೆ. ನಾನು ಹೇಳಿದ ಹಾಗೆ ಕೇಳು ಎಂದು ಗಿಳಿಗೆ ಹೇಳಿದಂತಾಗಿದೆ ಎಂದು ಪರೋಕ್ಷವಾಗಿ ಕೇಂದ್ರ ಸರಕಾರವನ್ನು ಛೇಡಿಸಿದರು.
ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ಚರ್ಚಿಸಲು ನಾವು ಕೂಡ ಸಿದ್ಧರಿದ್ದೇವೆ. ಕೇಂದ್ರ ಅನುದಾನ ನೀಡಿದರೂ ಅದನ್ನು ರಾಜ್ಯ ಸರಿಯಾಗಿ ಸದ್ಬಳಕೆ ಮಾಡಿಕೊಂಡಿಲ್ಲ. ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.