‘ಮಾಸಾಶನಕ್ಕಾಗಿ 5 ಕಿ.ಮೀ. ತೆವಳಿಕೊಂಡು ಬಂದ ಅಜ್ಜಿ’; ಸರಕಾರಕ್ಕೆ ಕನಿಕರವಿಲ್ಲವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ
ಬೆಂಗಳೂರು: ‘ಸರಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ, ಸಂತೋಷ. ಆದರೆ ಬಡ, ಅಶಕ್ತ ಮಹಿಳೆಯರಿಗೆ ನೆರವಾಗುವ ವೃದ್ಯಾಪ್ಯ ವೇತನ, ವಿಧವಾ ವೇತನವನ್ನು ಸಕಾಲಕ್ಕೆ ಮತ್ತು ನಿಯಮಿತವಾಗಿ ಬಿಡುಗಡೆ ಮಾಡಬೇಕು. ಮಾಶಾಸನಕ್ಕಾಗಿ ಈ ಅಜ್ಜಿ 5ಕಿ.ಮೀ. ತೆವಳಿಕೊಂಡು ಬಂದ ದೃಶ್ಯಗಳು ಪುನರಾವರ್ತನೆ ಆಗಬಾರದು. ಆ ತಾಯಿಗೆ ಸರಕಾರ ಎಲ್ಲ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ರಾಜ್ಯ ಕಾಂಗ್ರೆಸ್ ಸರಕಾರದವರು ಗ್ಯಾರೆಂಟಿಗಳನ್ನು ಕೊಟ್ಟು ಜನರ ಬದುಕು ಹಸನು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಹಸನು ಮಾಡುವ ಮಾತು ಒಳ್ಳೆಯದೇ. ಆದರೆ, ಜನಜೀವನ ಹೇಗೆ ಹಳಿ ತಪ್ಪುತ್ತಿದೆ ಎನ್ನುತ್ತಿರುವುದಕ್ಕೆ ಈ ದೃಶ್ಯವೇ ಜೀವಂತ ಸಾಕ್ಷಿ’ ಎಂದು ಉಲ್ಲೇಖಿಸಿದ್ದಾರೆ.
‘ಮಾಶಾಸನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದಿರುವ ಈ ಅಜ್ಜಿ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದ್ದಾರೆ. ಆ ಅಜ್ಜಿ ಅನುಭವಿಸಿರುವ ಯಾತನೆ ನಾವೆಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ ಹಾಗೂ ಸರಕಾರದ ಕ್ಷಮತೆಯನ್ನೂ ಪ್ರಶ್ನಿಸಿದೆ. ಈ ಅಜ್ಜಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದವರು. ರಸ್ತೆಯ ಬದಿಯಲ್ಲಿ ತೆವಳಿಕೊಂಡು ಸಾಗಿದ ಅಜ್ಜಿಯ ದುಸ್ಥಿತಿಯನ್ನು ಕಂಡು ನನಗೆ ತೀವ್ರ ಆಘಾತ ಉಂಟಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ನಾನು ಮುಖ್ಯಮಂತ್ರಿ ಆಗಿದ್ದಾಗ ವೃದ್ಧರು, ವಿಕಲಚೇತನರು, ವಿಧವೆಯರು, ದೇವದಾಸಿಯರು ಸೇರಿ ಸಮಾಜದ ವಿವಿಧ ದುರ್ಬಲ ಜನರಿಗೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟು, ಅವರ ಆರ್ಥಿಕ ಸಬಲೀಕರಣಕ್ಕೆ ಕ್ರಮ ವಹಿಸಿದ್ದೆ. ವೃದ್ದಾಪ್ಯ ವೇತನ ವಿಕಲಚೇತನರ ಮಾಶಾಸನವನ್ನು ಏರಿಕೆ ಮಾಡಿದ್ದೆ. ಕಷ್ಟದಲ್ಲಿರುವವರಿಗೆ ಆಸರೆ ಕೊಡುವುದು ಆಡಳಿತ ನಡೆಸುವವರ ಕರ್ತವ್ಯ. ಗೃಹಲಕ್ಷ್ಮಿಯರಿಗೆ 2ಸಾವಿರ ರೂ.ಕೊಡುತ್ತೀರಿ ಸರಿ. ಆದರೆ ಇಂತಹ ಅಸಂಖ್ಯಾತ ವೃದ್ಧ ಅಮ್ಮಂದಿರ ಪರಿಸ್ಥಿತಿ ಏನು? ಸರಕಾರಕ್ಕೆ ಕನಿಕರ ಎನ್ನುವುದು ಇಲ್ಲವೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.