ಆಸ್ಟ್ರೇಲಿಯಾ ಓಪನ್ ಗೆದ್ದ ರೋಹನ್ ಬೋಪಣ್ಣಗೆ 50 ಲಕ್ಷ ರೂ. ಬಹುಮಾನ: ಸಿಎಂ ಸಿದ್ದರಾಮಯ್ಯ
Photo: X/@siddaramaiah
ಬೆಂಗಳೂರು: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಅವರಿಗೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ.ಗಳ ಬಹುಮಾನ ಘೋಷಣೆ ಮಾಡಿದ್ದಾರೆ.
ಕೊಡಗು ಮೂಲದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರಿಗೆ ಕುಟುಂಬದ ಸಮ್ಮುಖದಲ್ಲಿ ಸಿದ್ದರಾಮಯ್ಯ ಅವರು ಸನ್ಮಾನ ಮಾಡಿದರು.
ಈ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ , ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ರೋಹನ್ ಬೋಪಣ್ಣ ಅವರ ಕುಟುಂಬದವರು ಹಾಜರಿದ್ದರು.
ಆಸ್ಟ್ರೇಲಿಯ ಓಪನ್ನಲ್ಲಿ ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ - ಮ್ಯಾಥ್ಯೂ ಎಬ್ಡೆನ್ ಜೋಡಿಯು, ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೋರಿ ಅವರನ್ನು 7-6(0), 7-5 ಸೆಟ್ ಗಳಿಂದ ಸೋಲಿಸುವ ಮೂಲಕ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
2017 ರ ಫ್ರೆಂಚ್ ಓಪನ್ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿರುವ ಬೋಪಣ್ಣ ಅವರಿಗೆ ಇದು ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.