ಲೈಂಗಿಕ ಹಗರಣ: ಜೂನ್ 6ರ ವರೆಗೆ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿಗೆ
ಪ್ರಜ್ವಲ್ ರೇವಣ್ಣ (PTI)
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಪ್ರಕರಣ ಸಂಬಂಧ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೂನ್ 6ರ ವರೆಗೆ ವಿಶೇಷ ತನಿಖಾ ತಂಡ (ಸಿಟ್)ದ ವಶಕ್ಕೆ ನೀಡಿ ಬೆಂಗಳೂರಿನ 42ನೆ ಎಸಿಎಂಎಂ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿದೆ.
ಬಂಧನ ಭೀತಿಯಲ್ಲಿದ್ದ ಪ್ರಜ್ವಲ್, ಲೋಕಸಭಾ ಚುನಾವಣೆಯ ಮತದಾನದ ನಂತರ ಕ್ಷೇತ್ರ ಬಿಟ್ಟು ವಿದೇಶಕ್ಕೆ ತೆರಳಿದ್ದರು. ಸತತ 35 ದಿನಗಳ ಬಳಿಕ ಜರ್ಮನಿಯಿಂದ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ತಡರಾತ್ರಿ 12.50ರ ಸುಮಾರಿಗೆಗೆ ಬಂದಿಳಿದ ಪ್ರಜ್ವಲ್ ಅವರನ್ನು ಎಸ್ಐಟಿ ತನಿಖಾಧಿಕಾರಿಗಳು ಬಂಧಿಸಿದರು.
ಅನಂತರ ಪ್ರಜ್ವಲ್ ರೇವಣ್ಣ ಅವರನ್ನು ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ವೈದಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಬಳಿಕ ಬಂಧನ ಪ್ರಕ್ರಿಯೆ ಅನ್ವಯ ಕೋರ್ಟ್ಗೆ ಹಾಜರುಪಡಿಸಿ, ಎಸ್ಐಟಿ ಪರ ವಕೀಲರು 15 ದಿನಗಳ ಕಾಲ ವಶಕ್ಕೆ ನೀಡಬೇಕೆಂದು ಮನವಿ ಮಾಡಿದರೆ, ಮತ್ತೊಂದೆಡೆ, ಕೇವಲ ಒಂದು ದಿನ ಎಸ್ಐಟಿ ವಶಕ್ಕೆ ನೀಡಿದರೆ, ಸಾಕು ಎಂದು ಪ್ರಜ್ವಲ್ ಪರ ವಕೀಲರು ವಾದ ಮಂಡಿಸಿದ್ದರು. ಅಂತಿಮವಾಗಿ ಕೋರ್ಟ್ ಆರು ದಿನಗಳ ಕಾಲ ಎಸ್ಐಟಿ ವಶಕ್ಕೆ ಒಪ್ಪಿಸಿದೆ.
ಎಸ್ಐಟಿ ಪರ ವಕೀಲ ಅಶೋಕ್ ನಾಯಕ್ ವಾದ ಮಂಡಿಸಿ, ‘ಆರೋಪಿಯು ವಿಕೃತಕಾಮಿಯಾಗಿದ್ದು, ಪ್ರಕರಣ ಬೆಳಕಿಗೆ ಬಂದ ತಕ್ಷಣ ತನಿಖೆಯಿಂದ ತಪ್ಪಿಸಿಕೊಳ್ಳಲು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ವಿದೇಶ ಪ್ರವಾಸಕ್ಕೆ ಹೋಗಿರುವುದಾಗಿ ಹೇಳಿದ್ದರು. ಈ ಹಿಂದೆ ಭಾರತಕ್ಕೆ ಬರಲು ಟಿಕೆಟ್ ಕಾಯ್ದಿರಿಸಿ ಬಳಿಕ ರದ್ದು ಮಾಡಿದ್ದಾರೆ. ಇನ್ನೇನು ವಿದೇಶದಲ್ಲಿ ಬಂಧಿಸುತ್ತಾರೆ ಎಂಬ ಅಂಶ ಗೊತ್ತಾದ ಹಿನ್ನೆಲೆಯಲ್ಲಿ ದೇಶಕ್ಕೆ ವಾಪಸ್ ಆಗಿದ್ದಾರೆ’ ಎಂದರು.
ಅಲ್ಲದೆ, ಮೊಬೈಲ್ ಮಾತ್ರ ಸಿಕ್ಕಿದ್ದರೂ ಫೇಸ್ಲಾಕ್ ಅಳವಡಿಸಲಾಗಿದೆ. ಜತೆಗೆ, ಪ್ರಕರಣದ ಸಮಂಜಸವಾದ ತನಿಖೆ ನಡೆಸಬೇಕಾಗುತ್ತದೆ. ಆದ್ದರಿಂದ ಎಸ್ಐಟಿ ವಶಕ್ಕೆ ನೀಡಬೇಕು. ಈ ಆರೋಪ ಜೀವಾವಧಿ ಶಿಕ್ಷೆ ನೀಡುವಂತಾಗಿದೆ ಎಂದೂ ಉಲ್ಲೇಖಿಸಿದರು.
ಪ್ರಜ್ವಲ್ ಪರ ವಕೀಲ ಜಿ.ಅರುಣ್ ಪ್ರತಿವಾದ ಮಂಡಿಸಿ, ಇದು ಜಾಮೀನು ಸಹಿತ ಆರೋಪ ಆಗಿದೆ. ವಿನಾಕಾರಣ ನಮ್ಮ ಕಕ್ಷಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿರುದ್ಧ ದಾಖಲಾಗಿರುವ ಪ್ರಕರಣ ನಾಲ್ಕು ವರ್ಷದ ಹಿಂದಿನದ್ದಾಗಿದೆ. ಕೇವಲ ಒಂದು ದಿನ ಎಸ್ಐಟಿ ವಶಕ್ಕೆ ನೀಡಿದರೆ ಸಾಕು ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸಿಟ್ ವಶಕ್ಕೆ ನೀಡಿ ಆದೇಶಿಸಿದರು. ಈ ವೇಳೆ ನಿಗದಿತ ಅವಧಿಯಲ್ಲಿ ತನಿಖೆ ಮುಗಿದರೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ.
‘ಕೋರ್ಟ್ನಲ್ಲಿ ಹಾಜರುಪಡಿಸಿದಾಗ ನ್ಯಾಯಾಧೀಶರು, ಪ್ರಜ್ವಲ್ ರೇವಣ್ಣನನ್ನು ಕಂಡು ನಿಮ್ಮ ಹೆಸರೇನು, ಎಲ್ಲಿ ಬಂಧಿಸಿದರು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ನನ್ನ ಹೆಸರು ಪ್ರಜ್ವಲ್, ರಾತ್ರಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು ಎಂದು ಉಲ್ಲೇಖಿಸಿದರು.
ಗುರುವಾರ ತಡರಾತ್ರಿ ಬಂದಿಳಿದ ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಮಹಿಳಾ ಅಧಿಕಾರಿಗಳೇ ಬಂಧಿಸಿ ಜೀಪಿನಲ್ಲಿ ಕಚೇರಿಗೆ ಕರೆತಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯವೂ ವೈರಲ್ ಆಗಿದೆ.
ಭವಾನಿ ರೇವಣ್ಣ ಬಂಧನ ಸಾಧ್ಯತೆ?: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿನ ಸಂತ್ರಸ್ತ ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದು, ಅವರನ್ನು ತನಿಖಾಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ.
ಶುಕ್ರವಾರ ಅರ್ಜಿಯ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿಂಬಿಸಿರುವಂತೆ ಸಿಟ್ ಜಾರಿ ಮಾಡಿರುವ ನೋಟಿಸ್ನಲ್ಲಿ ಯಾವುದೇ ಕಾನೂನಿನ ನಿಬಂಧನೆ ಉಲ್ಲೇಖಿಸಲಾಗಿಲ್ಲ. ಹೀಗಾಗಿ, ಅರ್ಜಿದಾರರಿಗೆ ಬಂಧನ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜ್ವಲ್ ಮತ್ತು ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಾಧ್ಯಮಗಳು ಬಿಂಬಿಸಿವೆ. ಸಿಟ್ ಮಾಧ್ಯಮಗಳು ಬಿಂಬಿಸಿದಂತೆ ಯಾವುದೇ ತೆರನಾದ ನೋಟಿಸ್ ಜಾರಿ ಮಾಡಿಲ್ಲ. ಮಾಧ್ಯಮಗಳ ವರದಿಯಿಂದ ತನಿಖಾ ಸಂಸ್ಥೆಯು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರುತ್ತಿರುವುದಾಗಿ ಉಲ್ಲೇಖಿಸಿದರು.
ಇದೇ ವೇಳೆ ಸಿಟ್ ಪರ ವಕೀಲರು, ಮಹಿಳೆ ಅಪಹರಣ ಪ್ರಕರಣದಲ್ಲಿ ಅರ್ಜಿದಾರರಾದ ಭವಾನಿ ವಿರುದ್ದ ಗಂಭೀರ ಆರೋಪ ಇದೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಕೋರಿದರು.
ಭವಾನಿಗೆ 2ನೆ ನೋಟಿಸ್: ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ತನಿಖೆಯ ಅಗತ್ಯವಿರುವುದರಿಂದ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರಿಗೆ ಸಿಟ್ ನೋಟಿಸ್ ನೀಡಿದೆ. ಕೆ.ಆರ್.ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಮೇ.15ರಂದು ಸಿಟ್ ಮೊದಲ ನೋಟಿಸ್ ನೀಡಿತ್ತು.
ಆನಂತರ, ಶುಕ್ರವಾರ ಮತ್ತೊಂದು ನೋಟಿಸ್ ನೀಡಲಾಗಿದ್ದು, ಪ್ರಕರಣದಲ್ಲಿ ನಿಮ್ಮ ವಿಚಾರಣೆ ಅಗತ್ಯವಿದ್ದು ಜೂನ್ 1ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗಿನ ಅವಧಿಯಲ್ಲಿ ನೀವು ತಿಳಿಸಿರುವ ವಿಳಾಸಕ್ಕೆ ತನಿಖಾಧಿಕಾರಿಗಳು ಬರುತ್ತಿದ್ದು, ಆ ಸಂದರ್ಭದಲ್ಲಿ ತಾವು ಹಾಜರಿರಬೇಕು ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.