7ನೆ ವೇತನ ಆಯೋಗದ ವರದಿ ಜಾರಿ ; ರಾಜ್ಯ ಸರಕಾರದಿಂದ ಅಧಿಕೃತ ಆದೇಶ
ಬೆಂಗಳೂರು: ಕಳೆದ ವಾರ ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗದ ವರದಿ ಜಾರಿಗೆ ಅನುಮೋದನೆ ನೀಡಲಾಗಿದ್ದು, ಈ ಸಂಬಂಧ ಸರಕಾರದಿಂದ ಸೋಮವಾರ ಅಧಿಕೃತ ಆದೇಶ ಹೊರಬಿದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್(ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, ‘ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಸರಕಾರಿ ನೌಕರರಿಗೆ ನೀಡಿದ್ದ ಬಹುದೊಡ್ಡ ಭರವಸೆಯನ್ನು ಈಡೇರಿಸುವ ಮೂಲಕ ರಾಜ್ಯ ಸರಕಾರವು ನುಡಿದಂತೆ ನಡೆದಿದೆʼ ಎಂದು ಪ್ರಕಟಿಸಿದ್ದಾರೆ.
ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಆದೇಶ ಹೊರಡಿಸಿದ್ದು, 2022ರ ಜುಲೈ 1ರಿಂದ ಜಾರಿಗೆ ಬರುವಂತೆ 7ನೆ ವೇತನ ಆಯೋಗದ ವರದಿಯಂತೆ ವೇತನ ಜಾರಿ ಗೊಳಿಸುವುದಾಗಿ ಘೋಷಣೆ ಮಾಡಿದ್ದರು. ರಾಜ್ಯ ಸರಕಾರಿ ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆ ಮಾಡಲಾಗಿದೆ.
ವೇತನ ಆಯೋಗದ ವರದಿಯ ಶಿಫಾರಸ್ಸುಗಳನ್ನು ಆಗಸ್ಟ್ 1ರಿಂದ ಜಾರಿಗೆ ಬರಲಿದ್ದು, ಇದರಿಂದ ಸರಕಾರಿ ನೌಕರರ ಮೂಲವೇತನ ಮತ್ತು ಪಿಂಚಣಿಯಲ್ಲಿ ಶೇ.58.50 ಹಾಗೂ ಮನೆಬಾಡಿಗೆ ಭತ್ಯೆಯಲ್ಲಿ ಶೇ.32 ಹೆಚ್ಚಳವಾಗಲಿದೆ. ಈ ಪರಿಷ್ಕರಣೆಯು ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿವಿಗಳ ಬೋಧಕೇತರ ಸಿಬ್ಬಂದಿಗಳಿಗೂ ಅನ್ವಯವಾಗಲಿದ್ದು, ಇದಕ್ಕಾಗಿ ವಾರ್ಷಿಕ 20,208 ಕೋಟಿ ರೂ.ಹೆಚ್ಚುವರಿ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.