ಕಾಂಗ್ರೆಸ್‍ನತ್ತ ಮುಖ ಮಾಡಿದ ಜೆಡಿಎಸ್ ನ 9 ಶಾಸಕರು: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್
ಮೈಸೂರು: 'ಜೆಡಿಎಸ್ ನ 9 ಶಾಸಕರುಗಳು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕುಮಾರಸ್ವಾಮಿ ಅವರ ರಾಜಕೀಯ ನಡೆಗೆ ಬೇಸತ್ತು ಯಾವುದೇ ಅಧಿಕಾರದ ಆಸೆ ಇಲ್ಲದೆ ಜೆಡಿಎಸ್ ನ 9 ಶಾಸಕರು ಕಾಂಗ್ರೆಸ್ ಗೆ ಬರಲು ಸಿದ್ಧರಾಗಿದ್ದಾರೆ. ಆದರೆ ಅವರು ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬರೋದಾದರೆ, ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಬಿಜೆಪಿಯವರಂತೆ ಆಪರೇಷನ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ'' ಎಂದು ತಿಳಿಸಿದರು.
''ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹತಾಶರಾಗಿ ಬಟ್ಟೆ ಬಿಚ್ಚಿಕೊಂಡು ಹೋರಾಡುತ್ತಿದ್ದಾರೆ. ಜೆಡಿಎಸ್ ಕೆಳದಿನಗಳಲ್ಲಿ ಮೂರು ಹೋಳಾಗಲಿದೆ'' ಎಂದು ಹೇಳಿದರು.
''ಜೆಡಿಎಸ್ ಮುಗಿದ ಅಧ್ಯಾಯ. ಯುಪಿಎ-ಎನ್ ಡಿಎ ಒಕ್ಕೂಟ ಇಬ್ಬರೂ ಜೆಡಿಎಸ್ ಅನ್ನು ಕರೆಯುತ್ತಿಲ್ಲ'' ಎಂದು ಅವರು ವ್ಯಂಗ್ಯವಾಡಿದರು.
''ಐಎಎಸ್ ಅಧಿಕಾರಿಗಳನ್ನು ಶಿಷ್ಟಾಚಾರ ಪಾಲನೆಗೆ ಕಳುಹಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ವಿರೋಧ ಪಕ್ಷಗಳು ಗೃಹಲಕ್ಷ್ಮಿ ಯೋಜನೆಗೆ ಪ್ರಚಾರ ಸಿಗಬಾರದು ಎಂದು ಗಲಾಟೆ ಎಬ್ಬಿಸುತ್ತಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕಾರ್ಯದರ್ಶಿ ಶಿವಣ್ಣ, ಕಾಂಗ್ರೆಸ್ ಮುಖಂಡ ಬಿ.ಎಂ.ರಾಮು, ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.