ಕೇರಳದಲ್ಲಿ ಆರೋಪಿಯಿಂದ ಲಂಚ ಸ್ವೀಕರಿಸಿದ ಪ್ರಕರಣ: ಬೆಂಗಳೂರಿನ ನಾಲ್ವರು ಪೊಲೀಸರು ಅಮಾನತು
ಬೆಂಗಳೂರು, ಆ.4: ಆನ್‍ಲೈನ್ ವಂಚನೆ ಪ್ರಕರಣದ ಆರೋಪಿಯಿಂದ 3.96 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದಡಿ ಇನ್ಸ್ ಪೆಕ್ಟರ್ ಸಹಿತ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.
ಎಸಿಪಿ ವರದಿ ಆಧರಿಸಿ ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ ಟೆಬಲ್ ಗಳಾದ ವಿಜಯ್ ಕುಮಾರ್, ಶಿವಾನಿ, ಕಾನ್ಸ್ ಟೆಬಲ್ ಸಂದೇಶ್‍ನನ್ನು ಅಮಾನತು ಮಾಡಲಾಗಿದೆ ಎಂದು ಬಿ.ದಯಾನಂದ್ ತಿಳಿಸಿದ್ದಾರೆ.
ಆನ್‍ಲೈನ್ ವಂಚನೆ ಪ್ರಕರಣದ ಸಂಬಂಧ ಕೇರಳಕ್ಕೆ ತೆರಳಿ ಆರೋಪಿಯಿಂದ 3.96 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಬೆಂಗಳೂರಿನ ವೈಟ್‍ಫೀಲ್ಡ್ ವಿಭಾಗದ ಸಿಇಎನ್ ಠಾಣೆ ಇನ್ಸ್ ಪೆಕ್ಟರ್ ಸೇರಿ ನಾಲ್ವರು ಪೊಲೀಸರನ್ನು ಕೇರಳದ ಕೊಚ್ಚಿ ಪೊಲೀಸರು ವಶಕ್ಕೆ ಪಡೆದು ಬಳಿಕ ನೋಟಿಸ್ ನೀಡಿ ಬಿಟ್ಟು ಕಳುಹಿಸಿದ ಘಟನೆ ಹಿನ್ನೆಲೆ, ಈ ಭ್ರಷ್ಟಾಚಾರ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಲಂಚ ಸ್ವೀಕರಿಸಿದ ಕಳಂಕಕ್ಕೆ ಗುರಿಯಾದ ಪೊಲೀಸರುಗಳನ್ನು ಅಮಾನತುಗೊಳಿಸಲಾಗಿದೆ ಎಂದು ಬಿ.ದಯಾನಂದ್ ಹೇಳಿದ್ದಾರೆ.