ನಕಲಿ ಬಂಗಾರ ನೀಡಿ ವಂಚನೆ ಪ್ರಕರಣ; ನಗದು ಸಹಿತ ಆರೋಪಿಗಳು ಪೊಲೀಸ್ ವಶ
ದಾವಣಗೆರೆ: ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರ ನೀಡಿ ವಂಚನೆ ಮಾಡಿದ ಅಂತರ ಜಿಲ್ಲಾ ಅರೋಪಿಗಳನ್ನು ಬಂಧಿಸಿ, 40 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ. ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಾವನಪುರ ಗ್ರಾಮದ ಸಂದೀಪ ಮತ್ತು ಚಿರಸ್ಥಹಳ್ಳಿ ಗ್ರಾಮದ ಈಶ್ವರಪ್ಪ ಬಂಧಿತ ಅರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿ ಚೀಮನಹಳ್ಳಿಯ ಗುತ್ತಿಗೆದಾರ ಗೋವರ್ಧನ ಬಳಿ ಅರೋಪಿಗಳು ಕೆಲಸ ಮಾಡುತ್ತಿದ್ದರು. ಆ ಮೂಲಕ ಪರಿಚಯ ಮಾಡಿಕೊಂಡ ಅರೋಪಿಗಳು ನಮ್ಮ ಮನೆಯ ಪಕ್ಕದಲ್ಲಿ ಪಾಯ ತಗೆಯುವಾಗ ಹಳೆ ಕಾಲದ ಬಂಗಾರದ ಬಿಲ್ಲೆಗಳು ದೊರೆತಿವೆ. ನಿಮಗೆ ಸ್ಯಾಂಪಲ್ ಕೊಡಿಸುತ್ತೇವೆ ಬಂದು ನೋಡಿ ಎಂದು ತಿಳಿಸಿದ್ದರು. ಅದರಂತೆ ಗುತ್ತಿಗೆದಾರ ಸ್ಥಳಕ್ಕೆ ಬಂದ ವೇಳೆ ವಂಚಕರು ನಕಲಿ ಬಂಗಾರದ ಬದಲು ಅಸಲಿ ಬಂಗಾರ ತೋರಿಸಿದ್ದಾರೆ. ಇದನ್ನು ನಂಬಿದ ಗುತ್ತಿಗೆದಾರ 60 ಲಕ್ಷ ಕ್ಕೆ ಎರಡೂವರೆ ಕೆಜಿ ಬಂಗಾರ ನೀಡುವಂತೆ ಮಾತನಾಡಿದ್ದಾರೆ.ಅದರಲ್ಲಿ ಅರೋಪಿಗಳಿಗೆ ಮುಂಗಡವಾಗಿ 44.5 ಲಕ್ಷ ಹಣ ನೀಡಿದ್ದಾರೆ. ಈ ವೇಳೆ ವಂಚಕರು ನಕಲಿ ಬಂಗಾರ ನೀಡಿ ಮೋಸ ಮಾಡಿ ಪರಾರಿಯಾಗಿದ್ದಾರೆ ಎಂದು ವಿವರಿಸಿದರು.
ಈ ಸಂಬಂದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ಪ್ರಕರಣ ದಾಖಲಿಸಿದ್ದಾರೆ. ಎಎಸ್ಪಿ ರಾಮಗೊಂಡ ಬಸರಗಿ ಚನ್ನಗಿರಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನಿರಂಜನ ನೇತೃತ್ವದಲ್ಲಿ ಪಿಎಸ್ಐ ಗುರುಶಾಂತಯ್ಯ ಸಿಬ್ಬಂದಿ ತಂಡ ಅರೋಪಿಗಳನ್ನು ಪತ್ತೆ ಹಚ್ಚಿ ನಗದು 44.5ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಚನ್ನಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಿರಂಜನ, ಪಿಎಸ್ಐ ಗುರುಶಾಂತಯ್ಯ, ಎಎಸ್ಐ ಶಶಿಧರ ಸಂತೆಬೆನ್ನೂರು ವೃತ್ತಕಚೇರಿಯ ರುದ್ರೇಶ, ಚನ್ನಗಿರಿ ಠಾಣೆ ಸಿಬ್ಬಂದಿ ಬೀರೇಶ್ವರ, ನರೇಂದ್ರ ಸ್ವಾಮಿ ಶ್ಲಾಘಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಇದ್ದರು.