ರೈತನಿಗೆ ಅವಮಾನ ಪ್ರಕರಣ | 7 ದಿನಗಳ ಕಾಲ ಜಿ.ಟಿ ಮಾಲ್ ಬಂದ್: ಸಚಿವ ಬೈರತಿ ಸುರೇಶ್
ಬೆಂಗಳೂರು : ಪಂಚೆಯುಟ್ಟ ರೈತರೊಬ್ಬರಿಗೆ ಪ್ರವೇಶ ನೀಡದೆ ಅವಮಾನ ಮಾಡಿದ ಬೆಂಗಳೂರಿನ ಮಾಗಡಿ ರಸ್ತೆಯ ಜಿ.ಟಿ.ಮಾಲ್ ಅನ್ನು 7 ದಿನ ಮುಚ್ಚಿಸುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಪ್ರಕಟಿಸಿದರು.
ಗುರುವಾರ ವಿಧಾನಸಭೆಯಲ್ಲಿ ರೈತರೊಬ್ಬರನ್ನು ಮಾಲ್‍ಗೆ ಬಿಡದೆ ಅವಮಾನ ಮಾಡಿದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಅಲ್ಲದೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪಕ್ಷಬೇಧ ಮರೆತು, ರೈತನಿಗೆ ಅವಮಾನ ಮಾಡಿದ ಮಾಲ್ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಭೈರತಿ ಸುರೇಶ್, ರೈತನಿಗೆ ಅವಮಾನ ಮಾಡಿದ ಮಾಲ್ ಅನ್ನು ಒಂದು ವಾರ ಮುಚ್ಚಿಸುವುದಾಗಿ ಹೇಳಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಯು.ಟಿ.ಖಾದರ್, ‘ಗ್ರಾಮೀಣ ಭಾಗದಿಂದ ಬಂದ ಯುವಕ ತಮ್ಮ ತಂದೆಯನ್ನು ಮಾಲ್‍ಗೆ ಕರೆದೊಯ್ದಾಗ ಅಲ್ಲಿ ಆ ರೈತನನ್ನು ಮಾಲ್‍ನೊಳಗೆ ಬಿಡಲಿಲ್ಲ. ಪಂಚೆ ತೊಟ್ಟಿದ್ದಾರೆಂಬ ಕಾರಣಕ್ಕೆ ಒಳಬಿಟ್ಟಿಲ್ಲ ಎನ್ನುವುದು ಗೊತ್ತಾಗಿದೆ. ಆದರೆ, ಇದು ಖಂಡನೀಯವಾಗಿದ್ದು, ಮಾಲ್ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ರೀತಿಯ ಘಟನೆಗಳು ಮತ್ತೆ ಆಗಬಾರದು. ಹೀಗಾಗಿ, ಎಲ್ಲ ಮಾಲ್‍ಗಳಿಗೂ ಸಂದೇಶ ರವಾನಿಸಬೇಕು. ಅಲ್ಲದೆ, ಮಾಲ್‍ನ ಮಾಲಕರು ಎಷ್ಟೇ ಶ್ರೀಮಂತರಾದರೂ ಅದು ಮುಖ್ಯವಲ್ಲ. ಬದಲಾಗಿ ಕಟ್ಟ ಕಡೆಯ ಜನರಿಗೆ ಸ್ಪಂದಿಸುವುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ‘ರೈತರಿಗೆ ಅವಮಾನ ಮಾಡಿದ ವಿಚಾರ ಹತ್ತಾರು ಬಾರಿ ಚರ್ಚೆಯಾಗಿದೆ. ಈಗ ರೈತರಿಗಾಗಿರುವ ಅವಮಾನಕ್ಕೆ ಸರಕಾರದಿಂದ ಕ್ರಮ ಕೈಗೊಳ್ಳಲು ಏನಾದರೂ ಆದೇಶ ಹೊರಡಿಸಿ. ಆ ಆದೇಶವನ್ನು ಕಾರ್ಯದರ್ಶಿಗಳು ಅನುಷ್ಠಾನ ಮಾಡಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ‘ರೈತರಿಗೆ ಮಾಲ್ ಪ್ರವೇಶ ಮಾಡಲು ಅವಕಾಶ ಕೊಡದೇ ಇರುವುದು ಸರಿಯಲ್ಲ. ಮಾಲ್ ಮಾಲಕರಾಗಲೀ, ಆಡಳಿತ ವರ್ಗದವರಾಗಲೀ ಅಪಮಾನ ಮಾಡುವುದು, ಘನತೆ, ಸ್ವಾಭಿಮಾನಕ್ಕೆ ಧಕ್ಕೆ ತರುವುದು ಅವಕಾಶವಿಲ್ಲ. ಈ ಘಟನೆ ಸಂಬಂಧ ವರದಿ ಪಡೆದು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.