ಅ. 31ರಿಂದ ಮಂಗಳೂರು ವಿಮಾನ ನಿಲ್ದಾಣದ ಆಡಳಿತ ಸಂಪೂರ್ಣ ಅದಾನಿ ಸಮೂಹಕ್ಕೆ
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಅಕ್ಟೋಬರ್ 31ರಂದು ಸಂಪೂರ್ಣವಾಗಿ ಅದಾನಿ ಸಮೂಹಕ್ಕೆ ಹಸ್ತಾಂತರಗೊಳ್ಳಲಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಭಾರತದ 6 ವಿಮಾನ ನಿಲ್ದಾಣಗಳ ಆಡಳಿತ, ಅಭಿವೃದ್ಧಿ ಹಾಗೂ ನಿರ್ವಹಣೆಗೆ ಏರ್ಪಡಿಸಲಾಗಿದ್ದ ಹರಾಜಿನಲ್ಲಿ ಅದಾನಿ ಸಮೂಹ ಜಯ ಗಳಿಸಿತ್ತು.
ಬಳಿಕ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಜವಾಬ್ದಾರಿಯನ್ನು 2020 ಅಕ್ಟೋಬರ್ 30ರಂದು ಅದಾನಿ ಸಮೂಹ ಕೈಗೆತ್ತಿಕೊಂಡಿತ್ತು. ಒಪ್ಪಂದದ ಪ್ರಕಾರ ಮೂರು ವರ್ಷಗಳ ಕಾಲ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹಾಗೂ ಅದಾನಿ ಸಮೂಹ ವಿಮಾನ ನಿಲ್ದಾಣದ ಆಡಳಿತವನ್ನು ಜಂಟಿಯಾಗಿ ನಿರ್ವಹಿಸಬೇಕು. ಎರಡೂ ಸಂಸ್ಥೆ ಸಮಾನ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ನಿಯೋಜಿಸಬೇಕು.
ಈ ಷರತ್ತು ಅಕ್ಟೋಬರ್ 30ರಂದು ಅಂತ್ಯಗೊಳ್ಳಲಿರುವುದರಿಂದ ಅದಾನಿ ಸಮೂಹ ವಿಮಾನ ನಿಲ್ದಾಣ ಆಡಳಿತವನ್ನು ಸಂಪೂರ್ಣವಾಗಿ ಕೈಗೆತ್ತಿಕೊಳ್ಳಲಿದೆ. ಅಕ್ಟೋಬರ್ 31ರಿಂದ ವಿಮಾನ ನಿಲ್ದಾಣದ ಹಣಕಾಸು, ಮಾನವ ಸಂಪನ್ಮೂಲ, ಆಡಳಿತ, ವಾಣಿಜ್ಯ, ಅಗ್ನಿಶಾಮ ಹಾಗೂ ಟರ್ಮಿನಲ್ ವಿಭಾಗವನ್ನು ಅದಾನಿ ಸಮೂಹ ನಿರ್ವಹಿಸಲಿದೆ. ವಿಮಾನ ಸಂಚಾರ ನಿಯಂತ್ರಣ (ಎಟಿಸಿ), ಕಾರ್ಗೊ ಹಾಗೂ ಸಿಎನ್ಎಸ್ ವಿಭಾಗವನ್ನು ಮಾತ್ರ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಿಸಲಿದೆ.