ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ತಕ್ಕ ಪಾಠ: ಸಲೀಂ ಅಹ್ಮದ್ ವಾಗ್ದಾಳಿ
ಬೆಂಗಳೂರು, ಆ.29: ಸುಳ್ಳು ಹೇಳುವಲ್ಲಿ ಯಾರಿಗಾದರೂ ಆಸ್ಕರ್ ಪ್ರಶಸ್ತಿ ನೀಡುವುದಾದರೆ, ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ನೀಡಬೇಕು ಎಂದು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದರು.
ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸುಳ್ಳುಗಳನ್ನೆ ನಂಬಿಕೊಂಡಿದ್ದಾರೆ.ಪ್ರತಿಯೊಂದು ವಿಷಯಕ್ಕೂ ಸುಳ್ಳು ಹೇಳಿಕೊಂಡು ಬರುತ್ತಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷವೂ ಕೊಟ್ಟ ಮಾತಿನಿಂದ ಈಗ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಹಗರಣಗಳ ಕುರಿತು ನ್ಯಾಯಾಂಗ ತನಿಖೆ ನಡೆಸುತ್ತಿದ್ದು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎನ್ನುವ ಮಾತಿನಂತೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲಿದೆ.ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಕೇವಲ 100 ದಿನಗಳಾಗಿದ್ದು, ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡುತ್ತಿದ್ದೇವೆ. ಜತೆಗೆ ರಾಜ್ಯದ ಹಿತಾಸಕ್ತಿ ಕಾಪಾಡುವುದು ನಮ್ಮ ಕೆಲಸ ಎಂದು ಹೇಳಿದರು.
ಈ ಹಿಂದೆ ಹೊಸ ಸರಕಾರ ಬಂದ ತಕ್ಷಣ ಆಶ್ವಾಸನೆ ಈಡೇರಿಸಲು ಮನಸ್ಸು ಮಾಡಿಲ್ಲ. ಆದರೆ, ನಾವು ನೀಡಿದ್ದ ಭರವಸೆಗಳನ್ನು 100 ದಿನಗಳಲ್ಲಿ ಈಡೇರಿಸಿದ್ದೇವೆ. ವಿರೋಧ ಪಕ್ಷದವರು ಹೇಗೆ ಮಾಡುತ್ತೀರಿ ಎಂದು ಟೀಕೆ ಮಾಡಿ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದರು. ಆದರೆ, ನಾವು ಕೇವಲ ಮತ ಪಡೆಯುವ ಸಲುವಾಗಿ ಗ್ಯಾರಂಟಿ ಘೋಷಣೆ ಮಾಡಲಿಲ್ಲ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಮಾತನ್ನು ಅಧಿಕಾರಕ್ಕೆ ಬಂದ 100 ದಿನದೊಳಗೆ ಈಡೇರಿಸಿ ದೇಶಕ್ಕೆ ಕಾಂಗ್ರೆಸ್ ಏನೆಂದು ತೋರಿಸಿದ್ದೇವೆ. ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ ತೃಪ್ತಿ ನಮಗಿದೆ ಎಂದು ಹೇಳಿದರು.
ಇನ್ನೂ ಪಕ್ಷದ ನಾಯಕರು, ಕಾರ್ಯಕರ್ತರಿಗೂ ಅಧಿಕಾರ ಹಂಚಿಕೆ ಮಾಡಲಿದ್ದು, ಈ ಸಂಬಂಧ ನಿಗಮ ಮಂಡಳಿಗಳ ನೇಮಕಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ.ಅದರಂತೆ ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆ ಆಗಲಿದೆ. ಅದೇ ರೀತಿ, ಲೋಕಸಭೆ ಟಿಕೆಟ್ ಸಹ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ವೀಕ್ಷಕರು, ಪಕ್ಷದ ಹಿರಿಯ ನಾಯಕರು ತೀರ್ಮಾನಿಸಿದ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡುತ್ತೇವೆ ಎಂದರು.