ಗಾಂಧೀಜಿ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗುತ್ತಿತ್ತು: ಅಡ್ಡಂಡ ಕಾರ್ಯಪ್ಪ
ಅಡ್ಡಂಡ ಸಿ.ಕಾರ್ಯಪ್ಪ ರಚಿತ ‘ಸತ್ಯವನ್ನೆ ಹೇಳುತ್ತೇನೆ' ಪುಸ್ತಕ ಮೈಸೂರಿನ ಕಿರು ರಂಗಮಂದಿರದಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.
ಮೈಸೂರು: "ಗಾಂಧಿ ಸಣ್ಣ ಸಣ್ಣ ಹುಡುಗಿಯರನ್ನು ಬೆತ್ತಲಾಗಿಸಿ, ತಾನು ಬೆತ್ತಲಾಗಿ ಅವರ ಜೊತೆ ಮಲಗಿಕೊಳ್ಳುತ್ತಿದ್ದೆ ಎಂದು ಸ್ವತಃ ಅವರೆ ಬರೆದುಕೊಂಡಿದ್ದಾರೆ. ಈಗ ಅವರು ಬದುಕಿದ್ದು ಆ ಮಾತು ಹೇಳಿದ್ದರೆ ಪೊಕ್ಸೋ ಕೇಸ್ ದಾಖಲಾಗುತ್ತಿತ್ತು" ಎಂದು ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದ್ದಾರೆ.
ನಗರದ ಕಿರುರಂಗ ಮಂದಿರದಲ್ಲಿ ತಾನು ರಚಿಸಿರುವ ‘ಸತ್ಯವನ್ನೆ ಹೇಳುತ್ತೇನೆ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಯಾವ ಸತ್ಯವನ್ನು ಕಳೆದ 60 ವರ್ಷಗಳಿಂದ ಮರೆಮಾಚಲಾಗಿತ್ತೋ ಅದನ್ನು ಹೊರತಂದಿದ್ದೇನೆ. ಇದರಿಂದ ನನಗೆ ಯಾವುದೇ ಭಯ ಇಲ್ಲ. ಕೇಸು ಗೀಸು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಇದೆಲ್ಲಾ ಒಂದು ರೀತಿಯ ಆಟ ಇದ್ದಂತೆ ಎಂದು ಹೇಳಿದರು.
ಗಾಂಧಿ ಒಬ್ಬ ಸಂತ. ಆತ ಸಂತನಾಗಿದ್ದೇನೆ ಎಂದು ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ, ತಾನು ಬೆತ್ತಲಾಗಬಹುದಿತ್ತೆ ಎಂದು ಪ್ರಶ್ನಿಸಿದರು.
ಇದನ್ನು ನಾಟಕವಾಗಿ ತೋರಿಸಲಾಗುವುದು. ಅದರಲ್ಲಿ ನಮ್ಮ ಹುಡುಗಿ ಒಬ್ಬಳು ಕಟಕಟೆಯಲ್ಲಿ ಅಂಬೇಡ್ಕರ್ ಕುರಿತು ಅಂಬೇಡ್ಕರ್ ಅವರೇ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಏಕೆ ಸೇರಿಸಿಲ್ಲ ಎಂದು ಕೇಳುತ್ತಾಳೆ. ಅದಕ್ಕೆ ಅಂಬೇಡ್ಕರ್ ಏಕೆ ಸೇರಿಸಬೇಕು? ಮುಂದೊಂದು ದಿನ ಬಲಪಂಥೀಯರು ಅಧಿಕಾರ ನಡೆಸಬಹುದು ಎಂದು ಹೇಳುತ್ತಾರೆ. ಈಗ ಬಲಪಂಥೀಯ ಸರಕಾರ ಬಂದಿಲ್ಲವೆ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂವಿಧಾನಕ್ಕೆ ಕೈ ಮುಗಿದು ಆಡಳಿತ ನಡೆಸುತ್ತಾರೆ. ಆದರೆ ಇಂದಿರಾ ಗಾಂಧಿ ಸಂವಿಧಾನಕ್ಕೆ ಹಲವು ಬಾರಿ ತಿದ್ದುಪಡಿ ಮಾಡಿ ಸಮಾಜವಾದ, ಜಾತ್ಯತೀತ ಪದಗಳನ್ನು ಸೇರಿಸಿದ್ದಾರೆ. ಇಂತಹ ಅನೇಕ ಸತ್ಯವನ್ನು ನಾನು ದಾಖಲಿಸಿದ್ದೇನೆ ಎಂದು ಹೇಳಿದರು.
ಕಳೆದ 60 ವರ್ಷಗಳಿಂದ ಇವರು ಹೇಳಿದ ಅರ್ಧಸತ್ಯವನ್ನು ಕೇಳಿಕೊಂಡು ಬಂದಿದ್ದೇವೆ. ಈಗ ನಾವು ಹೇಳುವ ಸತ್ಯವನ್ನು ಇವರು ಕೇಳಬೇಕು. ಯುವ ಪೀಳಿಗೆಗೆ ಸತ್ಯ ಏನು ಎಂಬುದನ್ನು ತೋರಿಸಿದ್ದೇನೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ನಟ ಪ್ರಕಾಶ್ ಬೆಳವಾಡಿ, ಆದಿತ್ಯ ಅಧಿಕಾರಿ ಆಸ್ಪತ್ರೆಯ ಡಾ.ಚಂದ್ರಶೇಖರ್, ಶಾಸಕ ಶ್ರೀವತ್ಸ, ಅನಿತಾ ಕಾರ್ಯಪ್ಪ, ಆರ್ಎಸ್ಎಸ್ ಅನಂತ ಕೃಷ್ಣ, ಅಕ್ಷಯ ರಾಜೇಂದ್ರ ಮತ್ತಿತರು ಕಾರ್ಯಕ್ರಮಲದಲ್ಲಿ ಉಪಸ್ಥಿತರಿದ್ದರು.