15 ತಿಂಗಳ ಮಗುವಿಗೆ ಅಪರೂಪದ ಕಾಯಿಲೆ; ಚುಚ್ಚುಮದ್ದು ಆಮದು ಸುಂಕಕ್ಕೆ ವಿನಾಯಿತಿ ಕೋರಿ ಪ್ರಧಾನಿಗೆ ಪತ್ರ ಬರೆದ ಸಿಎಂ
ಬೆಂಗಳೂರು, ನ.1: ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 15 ತಿಂಗಳ ಮೌರ್ಯ ಎಂಬ ಮಗುವಿಗೆ ಝೋಲ್ಗೆನ್‍ಸ್ಮ ಎಂಬ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಸುಂಕ ವಿನಾಯಿತಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ʼʼಪ್ರಧಾನಿ ನರೇಂದ್ರ ಮೋದಿ ಅವರೇ, ಕರ್ನಾಟಕದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದ ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಮಗುವಿನ ಕಾಯಿಲೆಯನ್ನು ಗುಣಪಡಿಸಬಹುದಾದ ಝೋಲ್ಗೆನ್‍ಸ್ಮ ಎಂಬ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಅದರ ಬೆಲೆ 17.5 ಕೋಟಿ ರೂ.ಇದೆ. ಕೇಂದ್ರ ಸರಕಾರವು ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕರುನಾಡಿನ ಪುಟ್ಟ ಕಂದನ ಪ್ರಾಣ ಉಳಿಸಲು ನೆರವಾಗಬೇಕುʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ X ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರವನ್ನು ಸಹ X ನಲ್ಲಿ ಪೋಸ್ಟ್ ಮಾಡಿದ್ದಾರೆ.