ಇದು ಕೈಕಟ್ಟಿ ತೆಪ್ಪಗೆ ಕೂರುವ ಕಾಲ ಅಲ್ಲ; ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ: ಸಿಎಂ ಸಿದ್ದರಾಮಯ್ಯ ಕರೆ
ಭಾರತ್ ಜೋಡೊ ಯಾತ್ರೆಯ ಫೋಟೋಗಳನ್ನು ಹಂಚಿಕೊಂಡ ಸಿಎಂ
ಬೆಂಗಳೂರು: ''ಇದು ನಾವೆಲ್ಲ ಕೈಕಟ್ಟಿ ತೆಪ್ಪಗೆ ಕೂರುವ ಕಾಲ ಅಲ್ಲ. ದೇಶ ಉಳಿಸುವ ಕರೆಗೆ ನಾವೆಲ್ಲರೂ ಓಗೊಡಬೇಕಾಗಿದೆ. ದೇಶದ ಏಕತೆ,ಸಮಗ್ರತೆಯನ್ನು ಉಳಿಸಲು, ದೇಶದ ಸಂಪತ್ತಿನ ಲೂಟಿಯನ್ನು ತಡೆಯಲು, ಸಂವಿಧಾನದ ಗೌರವವನ್ನು ಕಾಪಾಡಲು, ನಮ್ಮ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಭಾರತವನ್ನು ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ್ದ ಭಾರತ್ ಜೋಡೊ ಯಾತ್ರೆಯ ಒಂದನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಟ್ವಿಟರ್ ನಲ್ಲಿ ಭಾರತ್ ಜೋಡೊ ಯಾತ್ರೆಯ ಫೋಟೊಗಳನ್ನು ಹಂಚಿಕೊಂಡಿರುವ ಅವರು, ʼʼಈ ಹೋರಾಟಕ್ಕೆ ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಪಂಡಿತ ಜವಾಹರಲಾಲ ನೆಹರೂ, ಮೌಲಾನ ಅಬುಲ್ ಕಲಮ್ ಆಜಾದ್, ವಲ್ಲಭಭಾಯಿ ಪಟೇಲ್, ಶ್ರೀಮತಿ ಇಂದಿರಾಗಾಂಧಿ, ಶ್ರೀ ರಾಜೀವ್ ಗಾಂಧಿ ಸೇರಿದಂತೆ ಹಿರಿಯ ಚೇತನಗಳು ನಡೆಸಿದ ಹೋರಾಟ ಸ್ಪೂರ್ತಿಯಾಗಬೇಕುʼʼ ಎಂದು ಹೇಳಿದ್ದಾರೆ.
ʼʼಬನ್ನಿ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಮುನ್ನಡೆಯೋಣ, ಕೈಗೆ ಕೈ ಜೋಡಿಸಿ ಹೋರಾಟಕ್ಕೆ ಬಲತುಂಬೋಣ. ಒಡೆಯುವವರನ್ನು ಹಿಮ್ಮೆಟ್ಟಿಸಿ ಕಟ್ಟುವ ಕಾಯಕದಲ್ಲಿ ತೊಡಗಿಸೋಣ. ನವಕರ್ನಾಟಕವನ್ನೊಳಗೊಂಡ ನವಭಾರತವನ್ನು ನಿರ್ಮಿಸೋಣʼʼ ಎಂದು ಅವರು ಕರೆ ನೀಡಿದ್ದಾರೆ.
ʼʼಮೂರು ದಶಕಗಳ ಹಿಂದೆ ಈ ದೇಶದಲ್ಲಿ ರಥಯಾತ್ರೆಯೊಂದು ಹೊರಟಿತ್ತು. ದ್ವೇಷ, ಸುಳ್ಳು, ಅಪನಂಬಿಕೆಗಳನ್ನು ಬಿತ್ತುತ್ತಾ ಸಾಗಿದ ಆ ಯಾತ್ರೆ ಬಹುತ್ವ ಭಾರತದ ಎದೆಯೊಳಗೆ ಮಾಡಿದ ಗಾಯ ಇನ್ನೂ ಮಾಸಿಲ್ಲ. ಆ ಗಾಯಕ್ಕೆ ಪ್ರೀತಿ, ಶಾಂತಿ, ಸಹಬಾಳ್ವೆಯ ಮುಲಾಮು ಹಚ್ಚಿ ಗುಣಪಡಿಸುವ ಸದುದ್ದೇಶದಿಂದ ರಾಹುಲ್ ಗಾಂಧಿಯವರು ಪಾದಯಾತ್ರೆ ಶುರುಮಾಡಿದ್ದರುʼʼ ಎಂದು ಅವರು ವಿವರಿಸಿದ್ದಾರೆ.
ʼʼಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವ ಪ್ರಜೆಗಳ ದನಿಗೆ ಕಿವಿಗೊಡಬೇಕು. ಅವರ ಕಷ್ಟ-ಸುಖ, ಸಮಸ್ಯೆ-ಸಂಕಷ್ಟಗಳನ್ನು ಅರಿಯುವ ಕೆಲಸವನ್ನು ಮಾಡಬೇಕು. ಜನ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಬದುಕುವ ವಾತಾವರಣವನ್ನು ಕಲ್ಪಿಸಬೇಕು. ಆದರೆ ಭಾರತೀಯ ಜನತಾ ಪಕ್ಷ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಜನರ ನಡುವೆ ಪರಸ್ಪರ ದ್ವೇಷಾಸೂಯೆಗಳನ್ನು ಬಿತ್ತಿ ಸಮಾಜವನ್ನು ಜಾತಿ-ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಮಾಡುತ್ತಿದೆ. ಅನ್ಯಾಯದ ವಿರುದ್ದ ದನಿ ಎತ್ತುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ. ಇದರ ವಿರುದ್ದ ಸಂಘಟಿತವಾದ ಹೋರಾಟ ನಡೆಯಬೇಕಾಗಿದೆʼʼ ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.