ತಮ್ಮ ನೆಲದಲ್ಲೇ ಫೆಲೆಸ್ತೀನಿಯರು ಅತಂತ್ರರಾಗಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ: ಚಿಂತಕ ಶಿವಸುಂದರ್
ಶಿವಸುಂದರ್
ಮಂಡ್ಯ, ನ.17: ಉತ್ತರ ಗಾಝಾಪಟ್ಟಿ ಪಟ್ಟಣದಲ್ಲಿರುವ ಫೆಲೆಸ್ತೀನಿಯರನ್ನು ದಕ್ಷಿಣ ಫೆಲೆಸ್ತೀನ್ಗೆ ಅಟ್ಟಿ, ಅಲ್ಲಿಂದ ಈಜಿಪ್ಟ್ ನ ಮರಳುಗಾಡಿಗೆ ದಬ್ಬುವುದು ಇಸ್ರೇಲಿ ಆಡಳಿತದ ಕಾರ್ಯಸೂಚಿಯಾಗಿದೆ. ತಮ್ಮ ನೆಲದಲ್ಲೇ ಫೆಲೆಸ್ತೀನಿಯರು ಅತಂತ್ರರಾಗಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಿಂತಕ ಹಾಗೂ ಅಂಕಣಕಾರ ಶಿವಸುಂದರ್ ವಿಷಾದಿಸಿದ್ದಾರೆ.
ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಭೀಕರತೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ರೇಲ್ನ ಅಮಾನವೀಯ ವರ್ತನೆ ವಿರುದ್ಧ ಕಿಡಿಕಾರಿದರು.
ಸಂಘರ್ಷ ಪ್ರಾರಂಭವಾದ ಅ.7ರಿಂದ ಇಲ್ಲಿಯವರೆಗೆ ಇಸ್ರೇಲ್ ದಾಳಿಯಿಂದ ಸುಮಾರು 12 ಸಾವಿರ ಅಮಾಯಕ ಫೆಲೆಸ್ತೀನಿಯರು ಪ್ರಾಣ ಕಳೆದುಕೊಂಡಿದ್ದಾರೆ. 10 ನಿಮಿಷಕ್ಕೆ ಒಂದು ಮಗು ಹತ್ಯೆಯಾಗುತ್ತಿದ್ದು, ಒಂದು ಗಂಟೆಗೆ 45 ಬಾಂಬ್ಗಳು ಗಾಝಾಪಟ್ಟಿ ಮೇಲೆ ಸುರಿಯುತ್ತಿವೆ. 5 ಸಾವಿರ ಮಕ್ಕಳು ಸೇರಿದಂತೆ 12 ಸಾವಿರ ಅಮಾಯಕರು ಬಲಿಯಾಗಿದ್ದಾರೆ ಎಂದು ಅವರು ವಿವರಿಸಿದರು.
ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿ ಖಂಡನೀಯ. ಆದರೆ, ಇಸ್ರೇಲ್ ಪ್ರತಿಯಾಗಿ ಪೆಲೆಸ್ತೀನ್ಯರ ಅಮಾಯಕ ಜನರ ಮೇಲೆ ಮುಗಿಬಿದ್ದಿರುವುದು ಅಮಾನವೀಯ. ಮಹಿಳೆಯರು, ಮಕ್ಕಳು ಮಾತ್ರವಲ್ಲದೆ, ಆಸ್ಪತ್ರೆಯ ಮೇಲೂ ಮೇಲೆ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ಶಿಲ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ನಿವೃತ್ತ ಪ್ರಾಂಶುಪಾಲ, ಸಂಸ್ಕೃತ ಚಿಂತಕ ಪ್ರೊ.ಹುಲ್ಕರೆ ಮಹಾದೇವ ಸಂವಾದದಲ್ಲಿ ಪಾಲ್ಗೊಂಡಿದ್ದರು.