ಯುವನಿಧಿ ಯೋಜನೆ ಮೂಲಕ ಯುವಜನತೆಯ ಕಣ್ಣಿಗೆ ಮಣ್ಣೆರಚುವ ತಂತ್ರ: ಬಿ.ವೈ ರಾಘವೇಂದ್ರ
Photo: facebook.com/BYRBJP
ಶಿವಮೊಗ್ಗ: ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆ ಯುವಜನತೆಯ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದ್ದು, ಮಕ್ಕಳಿಗೆ ಮೋಸ ಮಾಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಿದೆ. ನಮ್ಮ ನೀರಿಕ್ಷೆ ಸುಳ್ಳಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯುವನಿಧಿ ಯೋಜನೆಗೆ ವಿವಿಧ ಮಾನದಂಡ ಹಾಕಿರುವ ರಾಜ್ಯ ಸರ್ಕಾರ, ಲೋಕಸಭಾ ಚುನಾವಣೆ ಮುಂದಿಟ್ಟು ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಭರವಸೆ ನೀಡಿದೆ. ಲೋಕಸಭಾ ಚುನಾವಣೆ ನಂತರ ಇವರ ಗ್ಯಾರಂಟಿ ಇರೋದು ಅನುಮಾನ ಎಂದರು.
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ. ಬರದಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ರೈತರ ನೋವಿಗೆ ಸರ್ಕಾರ ಸ್ಪಂದಿಸಿಲ್ಲ. ಸರ್ಕಾರ ನಿಷ್ಕ್ರಿಯವಾಗಿದೆ ಎಂದರು.
ನಗರದ ಫ್ರೀಡಂ ಪಾರ್ಕ್ ಗೆ ಅಲ್ಲಮಪ್ರಭು ಹೆಸರಿಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೇವೆ. ಫ್ರೀಡಂ ಪಾರ್ಕ್ ವಿಚಾರದಲ್ಲಿ ಸಿಎಂ ಗೆ ಮಾಹಿತಿ ಮಾಹಿತಿ ಕೊರತೆ ಇರಬಹುದು ಅನ್ನಿಸುತ್ತೆ. ನಾನೇ ಮಾಡಿಸಿದ್ದು ಅಂತಾ ಹೇಳಿದ್ದಾರೆ. ಫ್ರೀಡಂ ಪಾರ್ಕ್ ಮಾಡಿರೋದು ಬಿಜೆಪಿ ಸರ್ಕಾರ, ಯಡಿಯೂರಪ್ಪನವರ ಕಾಲದಲ್ಲಿ ಅದು ನಿರ್ಮಾಣವಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್,ಎಂ.ಎಲ್ ಸಿ ಎಸ್.ರುದ್ರೇಗೌಡ, ಪ್ರಮುಖರಾದ ಮಧುಸೂದನ್, ಅಣ್ಣಪ್ಪ,ವಿನ್ಸೆಂಟ್ ರೂಡ್ರಿಗಸ್ ಮೊದಲಾವರಿದ್ದರು.