ಭದ್ರಾ ನದಿಯಲ್ಲಿ ಮುಳುಗಿ ಬೆಂಗಳೂರು ಮೂಲದ ಯುವಕ ಮೃತ್ಯು
ಗೋಕುಲ್ - ಮೃತ ಯುವಕ
ಚಿಕ್ಕಮಗಳೂರು, ಅ.24: ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಯುವಕನೊಬ್ಬ ಭದ್ರಾ ನದಿಯಲ್ಲಿ ಈಜಲು ಹೋಗಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹೆಬ್ಬಾಳೆಯ ಭದ್ರಾ ನದಿಯಲ್ಲಿ ಮಂಗಳವಾರ ವದಿಯಾಗಿದೆ.
ಮೃತ ಯುವಕನನ್ನು ಬೆಂಗಳೂರಿನ ಶ್ರೀನಗರದ ನಿವಾಸಿ ಗೋಕುಲ್(25) ಎಂದು ಗುರುತಿಸಲಾಗಿದ್ದು, ಕಳಸ ಪೊಲೀಸರು, ಮುಳುಗು ತಜ್ಞರ ಸಹಾಯದಿಂದ ಯುವಕನ ಮೃತ ದೇಹವನ್ನು ಪತ್ತೆ ಮಾಡಿದ್ದಾರೆ. ಕಳಸ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಗೋಕುಲ್ ಬೆಂಗಳೂರು ಮೂಲದ ತನ್ನ ಇಬ್ಬರು ಸ್ವೇಹಿತರೊಂದಿಗೆ ಕಾರಿನಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಪ್ರವಾಸಕ್ಕೆ ಬಂದಿದ್ದರು. ಮಂಗಳವಾರ ಹೊರನಾಡು ದೇವಾಲಯಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ವೇಳೆ ಕಳಸ-ಹೊರನಾಡು ಮಧ್ಯೆ ಇರುವ ಹೆಬ್ಬಾಳೆಯ ಭದ್ರಾ ನದಿಯಿಂದ ಆಕರ್ಷಿತರಾಗಿ ನದಿಯಲ್ಲಿ ಈಜಲು ಇಳಿದಿದ್ದಾರೆ. ಭದ್ರಾ ನದಿಯ ನೀರಿನ ಆಳದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಯುವಕರ ಪೈಕಿ ಗೋಕುಲ್ ನದಿಯ ಮಧ್ಯಕ್ಕೆ ತೆರಳಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ ಈಜಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಈ ವೇಳೆ ಸ್ಥಳದಲ್ಲಿದ್ದ ಸ್ನೇಹಿತರು 112ಗೆ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ಕಳಸ ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿದ್ದ ಯುವಕನಿಗಾಗಿ ಹುಡುಕಾಡಿದ್ದಾರೆ. ಮಧ್ಯಾಹ್ನನ ನದಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.