ಚಂದ್ರಯಾನ-3 ತಂಡದಲ್ಲಿದ್ದ ಚಿಕ್ಕಮಗಳೂರಿನ ಯುವತಿ ಡಾ. ಕೆ.ನಂದಿನಿ ಯಾರು?
ಡಾ. ಕೆ.ನಂದಿನಿ
ಚಿಕ್ಕಮಗಳೂರು: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಶುಕ್ರವಾರ ಅಪರಾಹ್ನ 2:35ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಸೇರಿದೆ. ಚಂದ್ರನ ದಕ್ಷಿಣ ಧ್ರುವದ ಅನ್ವೇಷಣೆ ಈ ಅಭಿಯಾನದ ಗುರಿಯಾಗಿದೆ.
ಇನ್ನು ಉಡಾವಣೆ ಮಾಡಿದ ಚಂದ್ರಯಾನ- 3ರ ತಂಡದಲ್ಲಿ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ವಿಜ್ಞಾನಿಯೊಬ್ಬರು ಇರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.
ಬಾಳೆಹೊನ್ನೂರು ಸಮೀಪದ ತುಪ್ಪೂರು ಗ್ರಾಮದ ಬಾಳೆಹೊನ್ನೂರು ಪಟ್ಟಣದ ಕೇಶವಮೂರ್ತಿ, ಮಂಗಳ ದಂಪತಿ ಪುತ್ರಿ ಡಾ. ಕೆ.ನಂದಿನಿ ಮೇಲೆ ಇದೀಗ ನಿರೀಕ್ಷೆಯ ನೋಟಗಳು ನೆಟ್ಟಿವೆ.
ಡಾ.ನಂದಿನಿ ಕಳೆದ 8 ವರ್ಷಗಳಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು 2019ರ ಚಂದ್ರಯಾನ 2ರ ತಂಡದಲ್ಲೂ ಭಾಗವಹಿಸಿದ್ದು, ಸತತ ಎರಡನೇ ಬಾರಿಯೂ ಕಾರ್ಯನಿರ್ವಹಿಸಿ ಬಾಳೆಹೊನ್ನೂರಿಗೆ ಕೀರ್ತಿ ತಂದಿದ್ದಾರೆ.
ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್ನಲ್ಲಿ ಮಾಡಿ, ನಂತರ 12ನೇ ತರಗತಿಯವರೆಗೆ ಸೀಗೋಡು ಜವಾಹರ್ ನವೋದಯ ವಿದ್ಯಾಲಯ ದಲ್ಲಿ ವ್ಯಾಸಂಗ ಮಾಡಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಬಿಎಸ್ಸಿ, ಎಂಎಸ್ಸಿ ವಿದ್ಯಾಭ್ಯಾಸ, ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ನಲ್ಲಿ ಪೂರೈಸಿದ್ದಾರೆ. ಇದೇ ಸಂಸ್ಥೆಯಲ್ಲಿ 5 ವರ್ಷಗಳ ಪಿಎಚ್ಡಿ ಪೂರೈಸಿ, ನಂತರ ಬೆಂಗಳೂರು ಇಸ್ರೋದಲ್ಲಿ ಉದ್ಯೋಗದಲ್ಲಿದ್ದಾರೆ.