ಪ್ಯಾಕೇಜ್ ಪದ್ದತಿ ಸಂಪೂರ್ಣವಾಗಿ ರದ್ದುಗೊಳಿಸಿ : ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಒತ್ತಾಯ
ʼಕಾಂಗ್ರೆಸ್ ಸರ್ಕಾರದಲ್ಲೂ ಶೇ 40ರಷ್ಟು ಕಮಿಷನ್ ಮುಂದುವರಿದಿದೆʼ
ಬೆಂಗಳೂರು: ರಾಜ್ಯದ ಸರಕಾರಿ ಕಾಮಗಾರಿಗಳ ಪ್ಯಾಕೇಜ್ ಪದ್ದತಿಯನ್ನು ಅಳವಡಿಸಿದ್ದು, ಇದರಿಂದ ಟೆಂಡರ್ ಪಡೆದುಕೊಳ್ಳಲು ಸ್ಥಳೀಯ ಗುತ್ತಿಗೆದಾರರು ಹೆಣಗಾಡುತ್ತಿದ್ದಾರೆ. ಪ್ಯಾಕೇಜ್ ಪದ್ದತಿಯನ್ನು ಸಂಪೂರ್ಣ ರದ್ದುಗೊಳಿಸಿ ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
ಗುರುವಾರ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾತನಾಡಿ, ಯಾವುದೇ ಪ್ಯಾಕೆಜ್ ಟೆಂಡರ್ ಆಹ್ವಾನಿಸಿದರೂ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಎಚ್ಚರಿಸುವ ಕೆಲಸ ಮಾಡಿದ್ದೇವೆ. ಆದರೂ ಪ್ಯಾಕೇಜ್ ಟೆಂಡರ್ ಕರೆಯುವುದನ್ನು ಮುಂದುವರೆಸಲಾಗುತ್ತಿದೆ ಎಂದು ದೂರಿದರು.
ಪೊಲೀಸ್ ವಸತಿ ಗೃಹ ಅಭಿವೃದ್ದಿ ನಿಗಮ, ಬಿಬಿಎಂಪಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸೇರಿದಂತೆ ಟೆಂಡರ್ ಕರೆಯಲಾಗುತ್ತಿರುವ ಎಲ್ಲ ಇಲಾಖೆಗಳಲ್ಲಿ ಪ್ಯಾಕೇಜ್ ಪದ್ಧತಿ ಅನುಸರಿಸಲಾಗುತ್ತಿದೆ. ಮುಖ್ಯ ಇಂಜಿನಿಯರ್ ಅವರನ್ನು ಪ್ರಶ್ನಿಸಿದರೆ ಸಚಿವರು, ಶಾಸಕರತ್ತ ಕೈ ತೋರಿಸುತ್ತಾರೆ ಎಂದು ಅವರು ಹೇಳಿದರು.
ಸ್ಥಳೀಯ ಗುತ್ತಿಗೆದಾರರನ್ನು ದೂರವಿಟ್ಟು ನೆರೆ ರಾಜ್ಯಗಳ ಗುತ್ತಿಗೆದಾರರನ್ನು ಓಲೈಸುವ ಉದ್ದೇಶದಿಂದ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ ಎನ್ನುವುದು ರಹಸ್ಯವೇನಲ್ಲ. ಸರಕಾರದ ಈ ಆದೇಶದಿಂದ ರಾಜ್ಯ, ಸ್ಥಳೀಯ ಹಾಗೂ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಈ ವ್ಯವಸ್ಥೆ ಉರುಳಾಗಿ ಪರಿಣಮಿಸಿದೆ. ಅನಗತ್ಯ ಅರ್ಹತೆ ಮತ್ತು ನಿಯಮಗಳನ್ನು ಹೇರಿ ಸ್ಥಳೀಯರನ್ನು ದೂರವಿಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಪ್ಯಾಕೇಜ್ ಪದ್ದತಿಯಿಂದ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿದಂತಾಗುತ್ತದೆ. ವಾಮಮಾರ್ಗಗಳನ್ನು ಅನುಸರಿಸಿ ತಮಗೆ ಆಪ್ತರಾದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ಗುಣಮಟ್ಟ ಹಾಳಾಗುವುದರ ಜತೆಗೆ ಅರ್ಹ ಗುತ್ತಿಗೆದಾರ ಅನ್ಯಾಯಕ್ಕೊಳಗಾಗುತ್ತಾನೆ. ಆದುದರಿಂದ ಎಲ್ಲ ರೀತಿಯ ಕಾಮಗಾರಿಗಳನ್ನು ಟೆಂಡರ್ ಮೂಲಕವೇ ಹಂಚಿಕೆ ಮಾಡಿದರೆ ನ್ಯಾಯ ಒದಗಿಸಿದಂತಾಗುತ್ತದೆ. ಪ್ಯಾಕೇಜ್ ಟೆಂಡರ್ ಪದ್ಧತಿಯನ್ನು ಮುಂದುವರೆಸಿದರೆ ಹೋರಾಟ ಕರೆ ನೀಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಇತ್ತೀಚೆಗಷ್ಟೇ ಹೈಕೋರ್ಟ್ ತುರ್ತು ಸಂದರ್ಭ ಹೊರತುಪಡಿಸಿ ಪ್ಯಾಕೇಜ್ ಟೆಂಡರ್ ಆಹ್ವಾನಿಸಬಾರದು ಎಂದು ಸರಕಾರಕ್ಕೆ ನಿರ್ದೇಶನ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಭೆಯಲ್ಲಿ ಈ ಸಮಸ್ಯೆ ಕುರಿತು ಗಮನ ಸೆಳೆದಾಗ ಅವರು ಯಾವುದೇ ಕಾರಣಕ್ಕೂ ಪ್ಯಾಕೇಜ್ ಟೆಂಡರ್ ಆಹ್ವಾನಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದರೂ ಇಲಾಖೆಗಳು ಹೈಕೋರ್ಟ್ ಮತ್ತು ಮುಖ್ಯಮಂತ್ರಿಗಳ ಆದೇಶಗಳನ್ನು ಮೀರಿ ಪ್ಯಾಕೇಜ್ ಟೆಂಡರ್ ಆಹ್ವಾನಿಸುತ್ತಿರುವುದು ನಿಯಮಗಳ ಉಲ್ಲಂಘನೆ ಅಲ್ಲವೇ ಎಂದು ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಆರ್.ಮಂಜುನಾಥ್, ಬಿ.ಸಿ.ದಿನೇಶ್, ಬಿ.ಎನ್.ಕೃಷ್ಣೇಗೌಡ, ಎಂ. ರಮೇಶ್, ಚಿಕ್ಕಹೊಂಬಯ್ಯ ಮೊದಲಾದವರು ಉಪಸ್ಥಿತರಿದ್ದರು.
ಮುಂದುವರೆಯುತ್ತಿರುವ ಶೇ.40 ಕಮಿಷನ್:
‘ಬಿಜೆಪಿ ಸರಕಾರದಲ್ಲಿ ಶಾಸಕರೇ ನೇರವಾಗಿ ಶೇ.40 ಕಮಿಷನ್ ಕೇಳುತ್ತಿದ್ದು, ಇದೀಗ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಈ ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಬೇರೂರಿದ್ದು, ಶೇ.40 ಕಮಿಷನ್ ಮುಂದುವರೆದಿದೆ. ಹಣ ಬಿಡುಗಡೆಯಲ್ಲಿ ಜ್ಯೇಷ್ಠತೆಯನ್ನು ಪಾಲಿಸುತ್ತಿಲ್ಲ. ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಸೂಚಿಸುವರಿಗೆ ಮಾತ್ರ ಬಾಕಿ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ ಎರಡು ವರ್ಷಗಳಾದರೂ ಹಣ ಬಿಡುಗಡೆ ಮಾಡಲು ಮೀನಾಮೇಷ ಎಣಿಸಲಾಗುತ್ತಿದೆ’
ಡಿ.ಕೆಂಪಣ್ಣ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ