ಅವಹೇಳನಕಾರಿ ಪದ ಬಳಕೆ ಪ್ರಕರಣ: ಹೊಸ ದಿಗಂತ ಸೇರಿ 4 ಪತ್ರಿಕೆಗಳ ಸಂಪಾದಕರಿಂದ ಬೇಷರತ್ ಕ್ಷಮೆಯಾಚನೆ
ಬೆಂಗಳೂರು, ಆ.4: ವಕೀಲರ ಕುರಿತು ಮಾಡಲಾದ ವರದಿಯಲ್ಲಿ ಬಳಸಿದ್ದ ಅವಹೇಳನಕಾರಿ ಮತ್ತು ಅಸಂಸದೀಯ ಪದಗಳಿಗೆ ಹೊಸ ದಿಗಂತ ಸೇರಿ 4 ಪತ್ರಿಕೆಗಳ ಸಂಪಾದಕರು ಪ್ರಮಾಣ ಪತ್ರದ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದಾಖಲಿಸಲಾಗಿದ್ದ ಒಂದು ದಶಕದ ಹಿಂದಿನ ಮಾನನಷ್ಟ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
ಸಂಯುಕ್ತ ಕರ್ನಾಟಕ, ಹೊಸ ದಿಗಂತ, ನವೋದಯ ಮತ್ತು ಕಿತ್ತೂರು ಕರ್ನಾಟಕ ಎಂಬ ನಾಲ್ಕು ಕನ್ನಡ ಪತ್ರಿಕೆಗಳ ಸಂಪಾದಕರ ವಿರುದ್ಧ ವಕೀಲರೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ 2012ರಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಈ ಮೊಕದ್ದಮೆಯನ್ನು ಕಳೆದ ವಾರ ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯಗಳು ತಮ್ಮ ಮೇಲ್ವಿಚಾರಣಾ ಅಧಿಕಾರ ವ್ಯಾಪ್ತಿಯನ್ನು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೇಲೂ ಮಾಡಲು ಇದು ಸಕಾಲ ಎಂದು ಕರ್ನಾಟಕ ಹೈಕೋರ್ಟ್ ಪ್ರಕರಣದ ವಿಚಾರಣೆ ವೇಳೆ ಹೇಳಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮವನ್ನು ನಿರ್ವಹಿಸುವ ವ್ಯಕ್ತಿಗಳು “ಸುದ್ದಿ ವರದಿ ಮಾಡುವಾಗ ತಾಲಿಬಾನ್, ಗೂಂಡಾ, ಪುಂಡಾಟಿಕೆ ಎಂಬ ಪದಗಳನ್ನು ಬಳಸುವಾಗ ಅತ್ಯಂತ ಸಂಯಮ ತೋರುವುದು ಅಗತ್ಯವಾಗಿದೆʼʼ ಎಂದು ನ್ಯಾಯಾಲಯವು ಹೇಳಿದೆ.
2012ರಲ್ಲಿ ಬೆಂಗಳೂರಿನಲ್ಲಿ ವಕೀಲರ ಬಗ್ಗೆ ವರದಿ ಮಾಡುವಾಗ ಪತ್ರಿಕೆಗಳು ಅಸಂಸದೀಯ ಭಾಷೆಯನ್ನು ಬಳಸಿದ್ದವು. ಸುದ್ದಿಗಳನ್ನು ಸಿದ್ಧಪಡಿಸುವಾಗ ಯಾರದೆ ಘನತೆಗೆ ಧಕ್ಕೆಯಾಗದಂತೆ ಸಂಯಮವನ್ನು ವಹಿಸುತ್ತೇವೆ ಮತ್ತು ಸುದ್ದಿಯನ್ನು ವರದಿ ಮಾಡುವಾಗ ವಿವೇಕಯುತ ಮನೋಭಾವವನ್ನು ಹೊಂದಿರುತ್ತೇವೆ ಎಂಬ ಒಪ್ಪಂದದ ಜೊತೆಗೆ ಸಂಯುಕ್ತ ಕರ್ನಾಟಕ, ಹೊಸ ದಿಗಂತ, ನವೋದಯ ಮತ್ತು ಕಿತ್ತೂರು ಕರ್ನಾಟಕ ಪತ್ರಿಕೆಗಳ ಸಂಪಾದಕರು ಬೇಷರತ್ ಕ್ಷಮೆ ಯಾಚಿಸಿದ ನಂತರ ನ್ಯಾಯಾಲಯವು ವಿಚಾರಣೆಯನ್ನು ರದ್ದುಗೊಳಿಸಿತು.
2012ರಲ್ಲಿ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸಂಕೀರ್ಣದ ಆವರಣದಲ್ಲಿ ವಕೀಲರು, ಮಾಧ್ಯಮ ಸಿಬ್ಬಂದಿ ಮತ್ತು ಪೊಲೀಸರ ನಡುವಿನ ಘರ್ಷಣೆ ಉಂಟಾಗಿತ್ತು. ಈ ವೇಳೆ ನಡೆದ ಹಿಂಸಾಚಾರದ ಕುರಿತು ಶಾಸಕರೊಬ್ಬರು ನೀಡಿದ ಹೇಳಿಕೆಯನ್ನು ಪತ್ರಿಕೆಗಳು ವರದಿ ಮಾಡಿದ್ದವು. ಆದರೆ ವರದಿ ಮಾಡುವಾಗ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿದ ನಾಲ್ಕು ಪತ್ರಿಕೆಗಳ ವಿರುದ್ಧ ಗದಗ ಮೂಲದ ವಕೀಲ ದಾವಲಸಾಬ್ ನದಾಫ್ ಅವರು ಗದಗದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಹೀಗಾಗಿ ಪತ್ರಿಕೆಗಳ ಸಂಪಾದಕರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಚಾರಣೆಯ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.