ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ: 9 ಮಂದಿ ನೌಕರರಿಗೆ ತೀವ್ರ ಸುಟ್ಟ ಗಾಯ
ಬೆಂಗಳೂರು, ಆ.11: ಗುತ್ತಿಗೆದಾರರ ಬಿಲ್ ಬಾಕಿ ಪಾವತಿ ಸಂಬಂಧ ರಾಜ್ಯದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಬೆಂಗಳೂರಿನ ಕಾರ್ಪೋರೇಷನ್ ವೃತ್ತದಲ್ಲಿರುವ ಬಿಬಿಎಂಪಿ ಕೇಂದ್ರ ಕಚೇರಿಯ ‘ಗುಣಮಟ್ಟ ನಿಯಂತ್ರಣ ವಿಭಾಗದ ಪ್ರಯೋಗಾಲಯ’ ಹಾಗೂ ಕಟ್ಟಡದೊಳಗೆ ಬೆಂಕಿ ಅವಘಡ ಸಂಭವಿಸಿದ್ದು, ಬಿಬಿಎಂಪಿ ಮುಖ್ಯ ಅಭಿಯಂತರ ಶಿವಕುಮಾರ್ ಸೇರಿ 9 ಮಂದಿ ನೌಕರರಿಗೆ ಗಂಭೀರ ಗಾಯಗಳಾಗಿವೆ.
ಶುಕ್ರವಾರ ಮಧ್ಯಾಹ್ನ ಸುಮಾರಿಗೆ ದಿಢೀರ್ ಗುಣಮಟ್ಟ ನಿಯಂತ್ರಣ ವಿಭಾಗದ ಪ್ರಯೋಗಾಲಯದಲ್ಲಿ ರಸಾಯನಿಕ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲಿದ್ದ ಒಂಭತ್ತು ಮಂದಿ ಪಾಲಿಕೆ ಸಿಬ್ಬಂದಿಗೆ ಸುಟ್ಟ ಗಾಯಗೊಳಲಾಗಿದೆ. ಈ ಪೈಕಿ ಮುಖ್ಯ ಅಭಿಯಂತರ ಶಿವಕುಮಾರ್ ಅವರನ್ನು ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ 8 ಮಂದಿಗೆ ಸೈಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ವಿಕ್ಟೋರಿಯಾಗೆ ಕಳುಹಿಸಲಾಗಿದೆ ಎಂದು ಪಾಲಿಕೆ ಅಧಿಕಾರಿವೊಬ್ಬರು ಹೇಳಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ದೌಡಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪರಿಶೀಲನೆ ನಡೆಸಿ ಸ್ಥಳೀಯ ಸಿಬ್ಬಂದಿ ಬಳಿ ಮಾಹಿತಿ ಕಲೆಹಾಕಿದರು. ಅದೇ ರೀತಿ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಸಹ ಸ್ಥಳಕ್ಕೆ ಹಾಜರಾಗಿ ಸ್ಥಳೀಯರ ಹೇಳಿಕೆ ಪಡೆದರು.
ಬಳಿಕ ಅವರು ಘಟನೆ ಕುರಿತು ಪ್ರತಿಕ್ರಿಯಿಸಿ, ರಸಾಯನಿಕ ಪರೀಕ್ಷೆಯ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಮೂರು ರಸಾಯನಿಕ ಬಾಕ್ಸ್‍ಗಳ ಪೈಕಿ ಒಂದು ಸ್ಪೋಟಗೊಂಡು ಅವಘಡ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡ ಕೂಡಲೇ ಹಲವರು ಹೊರಗಡೆ ಓಡಿಹೋಗಿದ್ದಾರೆ. ಆದರೆ, ಕಚೇರಿಯಲ್ಲೇ ಸಿಲುಕಿದ ಸಿಬ್ಬಂದಿಗಳ ಮುಖ, ಕೈ-ಕಾಲು, ದೇಹದ ಭಾಗಗಳು ಸುಟ್ಟು ಹೋಗಿವೆ ಎಂದರು.