ನೇಹಾ ಕೊಲೆ ಪ್ರಕರಣದ ಆರೋಪಿಯನ್ನು ಗಲ್ಲಿಗೇರಿಸಬೇಕು: ಸಚಿವ ಎಂ.ಬಿ. ಪಾಟೀಲ್
ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಕೃತ್ಯವನ್ನು ಅತ್ಯಂತ ಬರ್ಬರ ಘಟನೆ ಎಂದು ಖಂಡಿಸಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಈ ದುಷ್ಕೃತ್ಯ ಎಸಗಿದವನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದರೆ.
ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಈ ಘಟನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹೇಯ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಇಂತಹ ದುಷ್ಕೃತ್ಯ ಎಸಗಿದವರಿಗೆ ತಕ್ಷಣವೆ ಕಠಿಣ ಶಿಕ್ಷೆ ಆಗಬೇಕು. ವಿಚಾರಣೆಯಲ್ಲಿ ವಿಳಂಬಕ್ಕೆ ಆಸ್ಪದವಾಗಬಾರದು ಎಂದು ಹೇಳಿದರು.
ಇಂತಹ ಘೋರ ದುಷ್ಕೃತ್ಯ ಎಸಗಿದವರಿಗೆ ಗಲ್ಲು ಶಿಕ್ಷೆಯಂತಹ ಕಠಿಣಾತಿ ಕಠಿಣ ಶಿಕ್ಷೆಯೇ ಆಗಬೇಕು. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ. ಇಂತಹ ಘಟನೆಯನ್ನು ಯಾರೆ ಮಾಡಿದರೂ ಖಂಡನಾರ್ಹ. ಇದೊಂದು ಬರ್ಬರ ಕೃತ್ಯವಾಗಿದ್ದು ಯಾವ ದೃಷ್ಟಿಯಿಂದಲೂ ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಈ ಘಟನೆಯ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಸರಕಾರ ಗಮನ ಕೊಡಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂತಹ ಘೋರಕೃತ್ಯ ಎಸಗಿದವರನ್ನು ವಿಳಂಬವಿಲ್ಲದೆ ಗಲ್ಲು ಶಿಕ್ಷೆಗೆ ಒಳಪಡಿಸಲು ಸಾಧ್ಯವಾಗುವಂತಹ ಕಾನೂನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಬೇಕು. ಚಿಕ್ಕವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲೂ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.