ನಕಲಿ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಸೃಷ್ಟಿಸುತ್ತಿದ್ದ ಆರೋಪ; ಮೂವರ ಸೆರೆ
Photo Credit- PTI
ಬೆಂಗಳೂರು, ಅ.21: ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಚಾಲನೆ ಪರವಾನಗಿ ಸೇರಿದಂತೆ ವಿವಿಧ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸುತ್ತಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿರುವುದಾಗಿ ವರದಿಯಾಗಿದೆ.
ಮೌನೇಶ್ ಕುಮಾರ್, ಭಗತ್ ಹಾಗೂ ರಾಘವೇಂದ್ರ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿವ ಭೈರತಿ ಸುರೇಶ್ ಬೆಂಬಲಿಗನಾಗಿ ಗುರುತಿಸಿಕೊಂಡಿದ್ದ ಮೌನೇಶ್ ಕುಮಾರ್, ಹೆಬ್ಬಾಳ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ಎಂಎಸ್ಎಲ್ ಟೆಕ್ನೋ ಸೊಲ್ಯೂಶನ್ ಎಂಬ ಕಚೇರಿ ನಡೆಸುತ್ತಿದ್ದ. ಇದೇ ಕಚೇರಿ ಮೇಲೆ ಅ.20ರಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಮೌನೇಶ್ ಕುಮಾರ್ ಹಾಗೂ ಭಗತ್ ಮತ್ತು ರಾಘವೇಂದ್ರನನ್ನು ಬಂಧಿಸಿದ್ದಾರೆ.
ಯಾವುದೇ ಕ್ಷೇತ್ರದ ಚುನಾವಣಾ ಗುರುತಿನ ಚೀಟಿ ಅಥವಾ ಯಾವುದೇ ವಿಳಾಸ ಅಥವಾ ಫೋಟೋಗೆ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪ ಮೌನೇಶ್ ವಿರುದ್ಧ ಕೇಳಿ ಬಂದಿತ್ತು. ಸದ್ಯ ಹೆಬ್ಬಾಳ ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕಂಪ್ಯೂಟರ್ಗಳು ಕೆಲ ಆಧಾರ್ ಮತ್ತು ಚುನಾವಣಾ ಗುರುತಿನ ಚೀಟಿಯನ್ನು ತಯಾರು ಮಾಡಲು ಬಳಸುತ್ತಿದ್ದ ಸಲಕರಣೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ಗೊತ್ತಾಗಿದೆ.