ಜಮೀನು ಪಡೆದು ಉದ್ಯೋಗ ನೀಡದೇ ವಂಚನೆ ಆರೋಪ: ಖಾಸಗಿ ಕಂಪೆನಿ ವಿರುದ್ಧ ಡೆತ್ ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ
ಶವಾಗಾರದ ಮುಂದೆ ರೈತರು, ಗ್ರಾಮಸ್ಥರಿಂದ ಪ್ರತಿಭಟನೆ
ರೈತರಿಂದ ಪ್ರತಿಭಟನೆ | ಮೃತ ರೈತ
ಮೈಸೂರು,ನ.20: ಕೈಗಾರಿಕೆಗೆ ಜಮೀನು ಪಡೆದು ಉದ್ಯೋಗ ಕೊಡುವುದಾಗಿ ಹೇಳಿ ವಂಚಿಸಿದ್ದ ಖಾಸಗಿ ಕಂಪೆನಿ ವಿರುದ್ಧ ಡೆತ್ ನೋಟ್ ಬರೆದಿಟ್ಟು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕು ಅಡಕನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತ ಸಿದ್ಧರಾಜು (28) ಎಂದು ತಿಳಿದು ಬಂದಿದೆ.
ಅಡಕನಳ್ಳಿ ಕೈಗಾರಿಕಾ ಪ್ರದೇಶಕ್ಕೆ ರೈತರ ಭೂಮಿಯನ್ನು ಸರಕಾರ ವಶಪಡಿಸಿಕೊಂಡಿತ್ತು. ಸರ್ವೆ ನಂ 96/1 ರಲ್ಲಿ ಸಿದ್ದರಾಜು ಕುಟುಂಬಕ್ಕೆ ಸೇರಿದ ಜಮೀನುಗಳನ್ನ ಕೆಐಡಿಬಿ ಸ್ವಾಧೀನಪಡಿಸಿಕೊಂಡಿದೆ.ಈ ವೇಳೆ ಭೂಮಿ ನೀಡಿದ ಕುಟುಂಬದವರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ ಕೊಟ್ಟ ಮಾತಿನಂತೆ ಖಾಸಗಿ ಕಂಪೆನಿಯು ಸಿದ್ದರಾಜು ಗೆ ಖಾಯಂ ಉದ್ಯೋಗ ಕೊಟ್ಟಿಲ್ಲ ಎಂದು ಆರೋಪಿಸಲಾಗಿದೆ.
ಇನ್ನು ಕೆಐಡಿಬಿ ಅಧಿಕಾರಿಗಳು ಸಹ ಕಂಪೆನಿ ಮುಖ್ಯಸ್ಥರಿಗೆ ಉದ್ಯೋಗ ನೀಡುವಂತೆ ಆದೇಶಿಸಿದ್ದಾರೆ. ಹೀಗಿದ್ದರೂ ಸಿದ್ದರಾಜು ಗೆ ಉದ್ಯೋಗ ಲಭಿಸಿಲ್ಲ.ಈ ಮಧ್ಯೆ ಉದ್ಯೋಗಕ್ಕಾಗಿ ಸಾಕಷ್ಟು ಭಾರಿ ಕಾರ್ಖಾನೆ ಮುಂಭಾಗ ಪ್ರತಿಭಟನೆ ಸಹ ನಡೆಸಿದ್ದಾರೆ. ಯಾವುದಕ್ಕೂ ಜಗ್ಗದ ಕಾರ್ಖಾನೆ ಮುಖ್ಯಸ್ಥರು ಸಿದ್ದರಾಜು ಮನವಿಯನ್ನ ತಿರಸ್ಕರಿಸಿದ್ದಾರೆನ್ನಲಾಗಿದೆ. ಇದರಿಂದ ಬೇಸತ್ತ ಸಿದ್ದರಾಜು ನಿನ್ನೆ ಕುಟುಂದವರೆಲ್ಲಾ ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವೇಳೆ ಡೆತ್ ನೋಟ್ ಬರೆದು ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಡೆತ್ ನೋಟ್ ನಲ್ಲಿ ಕಂಪೆನಿ ನೀಡಿದ ಕಿರುಕುಳವನ್ನ ವಿವರವಾಗಿ ಬರೆದುರುವ ಅವರು, ''ನನ್ನ ಸಾವಿಗೆ ಕಂಪೆನಿಯ ಪ್ಲಾಂಟ್ ಅಧಿಕಾರಿ ಮತ್ತು ಎಚ್ಆರ್ ಕಾರಣ ಎಂದು ಉಲ್ಲೇಖಿಸಿದ್ದಾರೆ. ಅವರಲ್ಲರಿಗೂ ಶಿಕ್ಷೆ ನೀಡಿ ನ್ಯಾಯ ಕೊಡಿಸಬೇಕೆಂದು ಸಿದ್ಧರಾಜು ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾರೆ.
ಡೆತ್ ನೋಟ್ ಆಧಾರದಂತೆ ನಂಜನಗೂಡು ಗ್ರಾಮಾಂತರ ಪೊಲೀಸರು ಕಂಪೆನಿಯ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ.
ರೈತರು ಮತ್ತು ಗ್ರಾಮಸ್ಥರಿಂದ ಪ್ರತಿಭಟನೆ:
ಮೃತ ರೈತ ಸಿದ್ಧರಾಜುವಿಗೆ ಅನ್ಯಾಯ ಮಾಡಿರುವ ಕಂಪೆನಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರೈತ ಮುಖಂಡರುಗಳು ಹಾಗೂ ಗ್ರಾಮಸ್ಥರು ಸೋಮವಾರ ಕೆ.ಆರ್.ಆಸ್ಪತ್ರೆಯ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.
'ಮೃತ ಸಿದ್ಧರಾಜು ಕುಟುಂಬಕ್ಕೆ ನ್ಯಾಯದೊರೆಯಬೇಕು. ಕಂಪನಿ ಮಾಲೀಕರು ಸ್ಥಳಕ್ಕೆ ಬಂದು ಪರಿಹಾರ ನೀಡಬೇಕು, ಮೃತನ ಪತ್ನಿಗೆ ಖಾಯಂ ನೌಕರಿ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮೃತನ ತಂದೆ, ತಾಯಿ,ಪತ್ನಿ, ಸಹೋದರ ರೈತ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಪ್ರಗತಿಪರ ಚಿಂತಕ ಉಗ್ರ ನರಸಿಂಹೇಗೌಡ, ಸಿಐಟಿಯು ಮುಖಂಡ ಚಂದ್ರಶೇಖರ ಮೇಟಿ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಶಿರಮಳ್ಳಿ ಸಿದ್ಧಪ್ಪ, ಹೆಜ್ಜಿಗೆ ಪ್ರಕಾಶ್, ಬವರಾಜು, ಪ್ರೇಮ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.