ಸಹಕಾರಿ ಬ್ಯಾಂಕ್ ಗೆ ವಂಚನೆ ಆರೋಪ | ಸಿಐಡಿ ತನಿಖೆಗೆ ಸಹಕರಿಸುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ಸಾಲ ಪಾವತಿಸದೆ ಸಹಕಾರಿ ಬ್ಯಾಂಕ್ ಗೆ ವಂಚನೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಸೂಚಿಸಿದೆ.
ಪ್ರಕರಣ ರದ್ದು ಕೋರಿ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ಪರ ಎನ್. ಜಗದೀಶ್ ಅವರು ವಾದ ಮಂಡಿಸಿ, ಸಿಐಡಿ ನೋಟಿಸ್ ನೀಡಿದರೂ ರಮೇಶ್ ಜಾರಕಿಹೊಳಿ ತನಿಖೆಗೆ ಹಾಜರಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ಜಾರಕಿಹೊಳಿಗೆ ಸಿಐಡಿ ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಅಲ್ಲದೆ ವಿಚಾರಣೆಗೆ ಹಾಜರಾದರೆ ರಮೇಶ್ ಜಾರಕಿಹೊಳಿಯರನ್ನು ಬಂಧಿಸದಂತೆ ಹೈಕೋರ್ಟ್ ಸಿಐಡಿಗೆ ಸೂಚಿಸಿದೆ. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಕಂಪನಿಗಾಗಿ 232 ಕೋಟಿ 88 ಲಕ್ಷ ರೂ. ಸಾಲ ಪಡೆದು ಮರುಪಾವತಿಸದ ಹಿನ್ನೆಲೆಯಲ್ಲಿ ಅಪೆಕ್ಸ್ ಬ್ಯಾಂಕ್ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ಬ್ಯಾಂಕ್ ನ ಪರವಾಗಿ ಸಾಲಕ್ಕೆ ಗ್ಯಾರಂಟರ್ ಆಗಿದ್ದ ರಮೇಶ್ ಜಾರಕಿಹೊಳಿ ಕಂಪನಿಯ ಹುದ್ದೆಗಳಿಗೆ ರಾಜಿನಾಮೆ ನೀಡಿ ಹೊಸಬರ ನೇಮಕವಾಗಿದೆ. ಹೀಗಾಗಿ ಎನ್ ಸಿಎಲ್ ಟಿ ಯಲ್ಲಿ ವಿಚಾರಣೆ ಇರುವಾಗ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಹೀಗಾಗಿ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಜಾರಕಿಹೊಳಿ ಹೈಕೋರ್ಟ್ ಮೆಟ್ಟಿಲೇರಿದ್ದರು.