ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದ್ದ ಆರೋಪ: ಗ್ರಾ.ಪಂ. ಸದಸ್ಯನ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಕನಕಪುರ, ಆ.24: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ವಂಚಿಸಿ ಬಿಪಿಎಲ್ ಕಾರ್ಡ್ ಪಡೆದಿರುವ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.
ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮ ಪಂಚಾಯತ್ನ ಬೊಮ್ಮನಹಳ್ಳಿ ವಾರ್ಡ್ ಸದಸ್ಯ ಕುಮಾರಸ್ವಾಮಿ ವಿರುದ್ಧ ಅಕ್ರಮ ಪಡಿತರ ಚೀಟಿ ಹೊಂದಿರುವ ಬಗ್ಗೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಕುಮಾರಸ್ವಾಮಿ ಐಷಾರಾಮಿ ಕಾರು, ಜಮೀನು, ಸ್ವಂತ ಮನೆ ಹೊಂದಿದ್ದು, ಬ್ಯಾಂಕಿನಿಂದ ತಂದೆಯ ಹೆಸರಿನ ಜಮೀನಿನ ಮೇಲೆ ಕೋಟ್ಯಂತರ ರೂ. ಸಾಲ ಪಡೆದಿದ್ದಾರೆ. ಅಪಾರ ಸಂಪತ್ತು ಹೊಂದಿರುವ ಟಿ.ಕುಮಾರಸ್ವಾಮಿ ಪತ್ನಿ ಲೀಲಾ, ತಂದೆ ಪುಟ್ಟೇಗೌಡ, ತಾಯಿ ರತ್ನಮ್ಮರ ಹೆಸರಿನಲ್ಲಿ ಬಿ.ಪಿ.ಎಲ್. ಕಾರ್ಡ್ ಪಡೆದು ಸರಕಾರ ಮತ್ತು ಆಹಾರ ಇಲಾಖೆಗೆ ವಂಚನೆ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಆಹಾರ ಇಲಾಖೆಯಿಂದ ಹಲವಾರು ಬಾರಿ ನೋಟಿಸ್ ನೀಡಿದ್ದರೂ, ಕುಮಾರಸ್ವಾಮಿ ಸ್ವೀಕರಿಸಿರಲಿಲ್ಲ. ಆಹಾರ ಇಲಾಖೆ ಮನೋಹರ್ ಸಾತನೂರು ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 1860 (ಉಪ ಕಲಂ 506, 420, 353) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.