ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಪ್ರಕರಣ: ಆರೋಪಿ ಪೊಲೀಸ್ ಪೇದೆಯ ಜಾಮೀನು ರದ್ದು
ಸಾಂದರ್ಭಿಕ ಚಿತ್ರ
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪೊಲೀಸ್ ಪೇದೆ ಫಕೀರಪ್ಪ ಹಟ್ಟಿ ಜಾಮೀನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಅಧೀನ ನ್ಯಾಯಾಲಯ ನೀಡಿದ್ದ ಜಾಮೀನು ರದ್ದು ಕೋರಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.
ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಪೊಲೀಸ್ ಠಾಣೆಗೆ ತೆರಳಿದಾಗ ಸಂತ್ರಸ್ತೆ ಪರಿಚಯ ಆಗಿದ್ದ ಮಹದೇವಪುರ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದ ಫಕೀರಪ್ಪ ಹಟ್ಟಿ ವಿವಾಹವಾಗುವುದಾಗಿ ನಂಬಿಸಿ 2019 ರಿಂದ 2022 ರವರೆಗೆ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಈ ಕುರಿತು ಪೊಲೀಸ್ ಠಾಣೆ, ನಗರ ಆಯುಕ್ತರಿಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಿರಲಿಲ್ಲ. ಹೀಗಾಗಿ ಸಂತ್ರಸ್ತೆ ಖಾಸಗಿ ದೂರು ದಾಖಲಿಸಿದ ಬಳಿಕ ಪೇದೆ ಫಕೀರಪ್ಪ ಹಟ್ಟಿ ನಿರೀಕ್ಷಣಾ ಜಾಮೀನು ಪಡೆದಿದ್ದ. ಈಗ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ಹೈಕೋರ್ಟ್ ರದ್ದುಪಡಿಸಿದೆ.
ಅಲ್ಲದೆ ಜಾಮೀನು ರದ್ದಾದ ವಿಚಾರ ಕೋರ್ಟ್ ಗಮನಕ್ಕೂ ತರದ ಆರೋಪಿ ಪೇದೆಯನ್ನು ವಶಕ್ಕೆ ಪಡೆಯಲು ಸ್ಥಳೀಯ ಡಿಸಿಪಿಗೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ಕೋರ್ಟ್ ದಾರಿ ತಪ್ಪಿಸಿದ ಆರೋಪಿ ಪೇದೆ ಫಕೀರಪ್ಪಗೆ 1 ಲಕ್ಷ ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿ ಮಾಡದೆ ಹೋದಲ್ಲಿ ರಿಕವರಿ ಮಾಡಲಿಕ್ಕೆ ಆದೇಶಿಸಲಾಗಿದೆ. ಕೋರ್ಟ್ ಅನ್ನೇ ದಾರಿ ತಪ್ಪಿಸಿದ ಆರೋಪಿ ವಿರುದ್ಧ ಎಫ್ಐಆರ್ ಗೆ ಸೂಚನೆ ರಿಜಿಸ್ಟ್ರಾರ್ ಗೆ ಹೈಕೋರ್ಟ್ ಆದೇಶಿಸಿದೆ.