ಪರಪ್ಪನ ಅಗ್ರಹಾರ ಜೈಲಿನಿಂದ ಸ್ಥಳಾಂತರ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋದ ಆರೋಪಿ ಪ್ರದೋಶ್
ರೇಣುಕಸ್ವಾಮಿ ಹತ್ಯೆ ಪ್ರಕರಣ
ರೇಣುಕಸ್ವಾಮಿ
ಬೆಂಗಳೂರು, ಸೆ.4: ಚಿತ್ರದುರ್ಗದ ಯುವಕ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ 14ನೇ ಆರೋಪಿ ಪ್ರದೋಶ್, ಪರಪ್ಪನ ಅಗ್ರಹಾರ ಜೈಲಿನಿಂದ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವುದನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ.
ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಹಾಜರಾದ ಪ್ರದೋಶ್ ಪರ ವಕೀಲರು, ಆರೋಪಿಯನ್ನು ಪರಪ್ಪನ ಕೇಂದ್ರ ಕಾರಾಗೃಹದಿಂದ ಸ್ಥಳಾಂತರಿಸಲಾಗಿದೆ. ಇದನ್ನು ರದ್ದು ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, "ದರ್ಶನ್ ಪ್ರಕರಣವೇ?, ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಬರಬೇಕಾ?" ಎಂದು ವಕೀಲರನ್ನು ಪ್ರಶ್ನಿಸಿದರು. "ಹೌದು ದರ್ಶನ್ ಕೇಸ್ ಸ್ವಾಮಿ, ಅದರೆ ನಾನು ಎ14 ಪರಪ್ಪನ ಅಗ್ರಹಾರ ಜೈಲಿನಿಂದ ಅರ್ಜಿದಾರರನ್ನ ಶಿಫ್ಟ್ ಮಾಡಿರುವುದನ್ನು ಮಾತ್ರ ರದ್ದು ಮಾಡಲು ಅರ್ಜಿ ಸಲ್ಲಿಸಿದ್ದೇನೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವೈರಲ್ ಆದ ಪ್ರಕರಣದಲ್ಲಿ ಎಫ್ ಐಆರ್ ದಾಖಲಾಗಿದ್ದು, ಅದರಲ್ಲಿ ಅರ್ಜಿದಾರರ ಪಾತ್ರವಿಲ್ಲ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ತನ್ನ ಕಕ್ಷಿದಾರರನ್ನು ಸ್ಥಳಾಂತರ ಮಾಡಿರುವ ತೀರ್ಮಾನದ ಬಗ್ಗೆ ಪ್ರಶ್ನಿಸಿದ್ದೇನೆ. ಈ ವಿಚಾರವನ್ನು ತುರ್ತು ವಿಚಾರಣೆ ಮಾಡುವಂತೆ ಮನವಿ ಮಾಡಿದರು.
ವಿಚಾರಣೆಯನ್ನು ಮುಂದಿನ ವಾರಕ್ಕೆ ಹೈಕೋರ್ಟ್ ಮುಂದೂಡಿದೆ.