ರಾಜ್ಯದಲ್ಲಿ 2032ರ ಹೊತ್ತಿಗೆ ಒಂದು ಟ್ರಿಲಿಯನ್ ಡಾಲರ್ ಜಿಡಿಪಿ ಸಾಧನೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದಲ್ಲಿ 2032ರ ಹೊತ್ತಿಗೆ ಒಂದು ಟ್ರಿಲಿಯನ್ ಡಾಲರ್ ಜಿಡಿಪಿ ಸಾಧಿಸಲು ವಾರ್ಷಿಕ ಶೇ.15-16ರಷ್ಟು ಕೈಗಾರಿಕಾ ಬೆಳವಣಿಗೆ ಸಾಧಿಸುವ ಗುರಿ ನಮ್ಮದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಮುಂಬರುವ ಫೆಬ್ರವರಿ 12, 13 ಮತ್ತು 14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಜಾಗತಿಕ ಹೂಡಿಕೆದಾರರ ಸಮಾವೇಶ'ದ ಭಾಗವಾಗಿ ನಡೆದ ಕರ್ಟನ್ ರೈಸರ್(ಅನಾವರಣ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರವು ಗ್ರಾಮೀಣಾಭಿವೃದ್ಧಿ ಮತ್ತು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿ ಸಾಧಿಸಲು ಪಣ ತೊಟ್ಟಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಕೈಗಾರಿಕಾ ಕ್ಲಸ್ಟರ್ ಗಳನ್ನು ಬೆಳೆಸಲು ತೀರ್ಮಾನಿಸಲಾಗಿದೆ. ಮಹಾನಗರಗಳ ಆಚೆಗೂ ಆರ್ಥಿಕ ಪ್ರಗತಿಯನ್ನು ಕೊಂಡೊಯ್ಯಬೇಕು ಎನ್ನುವುದು ನಮ್ಮ ಸಂಕಲ್ಪವಾಗಿದೆ ಎಂದು ಅವರು ನುಡಿದರು.
ಸ್ಥಳೀಯ ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು, ವಿಶೇಷ ಪರಿಣತ ಉದ್ದಿಮೆಗಳನ್ನು ಬೆಳೆಸಲು ಸರಕಾರ ಬದ್ಧವಾಗಿದೆ. ಇದಕ್ಕಾಗಿ ಎಲೆಕ್ಟ್ರಾನಿಕ್ಸ್, ಆಟೋ ಮತ್ತು ಇ.ವಿ., ಫಾರ್ಮಸುಟಿಕಲ್ಸ್, ಜವಳಿ ಮುಂತಾದ ವಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹೆಚ್ಚುಹೆಚ್ಚು ಹೂಡಿಕೆ ಆಕರ್ಷಣೆ ಮತ್ತು ಉದ್ಯೋಗಸೃಷ್ಟಿ ಎರಡಕ್ಕೂ ನಾವು ಒತ್ತು ಕೊಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೂ ಆದ್ಯ ಗಮನ ಹರಿಸಲಾಗುತ್ತಿದೆ. ಜೊತೆಗೆ ಕಳೆದ ಬಾರಿಯಂತೆ ಈ ಸಲವೂ ನವೋದ್ಯಮಗಳಿಗೆ ಬಂಡವಾಳ ಸೆಳೆಯಲು ವಿಶೇಷ ಉಪಕ್ರಮ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಇದರ ಭಾಗವಾಗಿ ಎಸ್‍ಎಂಇ ಕನೆಕ್ಟ್- 25' ಮತ್ತು ‘ವೆಂಚರೈಸ್-24' ಪರಿಕಲ್ಪನೆಗಳನ್ನು ರೂಪಿಸಲಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ರಾಜ್ಯದ ತಯಾರಿಕಾ ವಲಯದ ಕಾರ್ಯ ಪರಿಸರವನ್ನು ಜಾಗತಿಕ ಮಟ್ಟದ ಉದ್ದಿಮೆಗಳಿಗೆ ತೋರಿಸಲು ನಾಲ್ಕು ರೋಡ್ ಶೋ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಅಲ್ಲದೆ, ಗಣ್ಯ ಉದ್ಯಮಿಗಳನ್ನು ಖುದ್ದಾಗಿ ಆಹ್ವಾನಿಸಲು ಜೂ.24ರಿಂದ 28ರವರೆಗೆ ಜಪಾನಿನ ಟೋಕಿಯೋ, ನಗೋಯ ಮತ್ತು ಒಸಾಕ ನಗರಗಳಿಗೆ ಹಾಗೂ ಜುಲೈ ಮೊದಲ ವಾರದಲ್ಲಿ ದಕ್ಷಿಣ ಕೊರಿಯಾದ ಸಿಯೋಲ್, ಇಂಚೆಯಾನ್ ಮತ್ತು ಜಿಯಾಂಗಿ ನಗರಗಳಿಗೆ ಭೇಟಿ ಕೊಡಲಾಗುವುದು ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.
‘ಬೆಳವಣಿಗೆಯ ಹೊಸಪರಿಕಲ್ಪನೆ’ ಧ್ಯೇಯದಡಿ ನಡೆಯಲಿರುವ ಸಮಾವೇಶದ ಮೂಲಕ ತಯಾರಿಕಾ ವಲಯ, ಮೂಲಸೌಕರ್ಯ ಅಭಿವೃದ್ಧಿ, ಐಟಿ, ಇಂಧನ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಮತ್ತು ಕೌಶಲ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ, ಜವಳಿ ಮತ್ತು ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಜರಿದ್ದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸ್ವಾಗತಿಸಿದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರು ಹೂಡಿಕೆದಾರರ ಸಮಾವೇಶ ಹಾಗೂ ಉದ್ಯಮ ಬೆಳವಣಿಗೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಹಲವು ಗಣ್ಯ ಉದ್ಯಮಿಗಳು ಉಪಸ್ಥಿತರಿದ್ದರು. ಸಣ್ಣ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ವಂದಿಸಿದರು.