ಪುಸ್ತಕ ಓದುವ ಮೂಲಕ ಗಳಿಸುವ ಜ್ಞಾನಾರ್ಜನೆ ಹೆಚ್ಚು ಪರಿಣಾಮಕಾರಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಜ್ಞಾನಾರ್ಜನೆಗೆ ಪುಸ್ತಕಗಳ ಓದು ಬಹಳ ಅಗತ್ಯ. ಉಳಿದೆಲ್ಲಾ ಜ್ಞಾನ ಮೂಲಗಳಿಗಿಂತ ಪುಸ್ತಕ ಓದಿನ ಮೂಲದ ಜ್ಞಾನಾರ್ಜನೆ ಬಹಳ ಪರಿಣಾಮಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಶನಿವಾರ ನಗರದ ಎಚ್.ಎಸ್.ಆರ್.ಲೇಔಟ್‍ನಲ್ಲಿ ನಡೆದ ಪುಸ್ತಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಮತ್ತು ಪತ್ರಿಕೆಯನ್ನು ಖರೀದಿಸಿ ಓದುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ರೀತಿಯ ಪುಸ್ತಕ ಸಂತೆಯನ್ನು ಆಯೋಜಿಸಿರುವುದು. ಪುಸ್ತಕೋದ್ಯಮದಲ್ಲಿ ಹೊಸ ಕ್ರಾಂತಿ ಮಾಡಿದಂತೆ ಎಂದು ಶ್ಲಾಘಿಸಿದರು.
ಜನರಿಗೆ ಇಂದು ಪುಸ್ತಕ ಓದಲು ಅನೇಕ ಅವಕಾಶಗಳಿವೆ. ಇಲ್ಲಿ 135 ಮಳಿಗೆಗಳನ್ನು ತೆರಯಲಾಗಿದೆ. ಪುಸ್ತಕ ಬರೆದ ನಂತರ ಅದನ್ನು ಪ್ರಕಟಗೊಳಿಸಲು ಪ್ರಕಾಶಕರು ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಪ್ರಕಾಶಕರ ಸಂಘದ ರಾಜ್ಯಾಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಆರ್. ದೋಡ್ಡೇಗೌಡ, ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ರೋಟರಿ ಕ್ಲಬ್ ಮುಖ್ಯಸ್ಥ ರಾಜೀವ್ ಥ್ಯಾಕಟ್, ಪುಸ್ತಕಸಂತೆಯ ಆಯೋಜಕ ವೀರಕಪುತ್ರ ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.
‘ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆಯು ಪ್ರತಿವರ್ಷ ಪುಸ್ತಕವನ್ನು ಸಗಟು ಖರೀದಿಸುತ್ತಾ ಬಂದಿದೆ. ಪ್ರಕಟವಾದ ಪುಸ್ತಕವನ್ನು ಅದೇ ವರ್ಷ ಖರೀದಿಸಿ ಆಯಾ ವರ್ಷದಲ್ಲೇ ಅದರ ಹಣವನ್ನು ಬಿಡುಗಡೆಯಾಗಬೇಕು. ರಾಜ್ಯದ ಗ್ರಂಥಾಲಗಳು ಉಗ್ರಾಣದಂತಾಗಿವೆ. ಅಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸಬೇಕು. ಪ್ರತೀ ತಿಂಗಳು ಒಂದು ಪುಸ್ತಕದ ಕುರಿತು ಕಾರ್ಯಕ್ರಮವನ್ನು ಗ್ರಂಥಾಲಯ ಇಲಾಖೆಯ ವತಿಯಿಂದ ಆಯೋಜಿಸಿ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ಕೆಲಸ ಸರಕಾರ ಮಾಡಬೇಕಿದೆ’
ಡಾ.ಬರಗೂರು ರಾಮಚಂದ್ರಪ್ಪ ನಾಡೋಜ, ಹಿರಿಯ ಸಾಹಿತಿ