ವಲಸೆ ಕುರಿಗಾಹಿಗಳ ಮೇಲಿನ ದೌರ್ಜನ್ಯ ತಡೆಯಲು ಕಾಯ್ದೆ : ಸಿಎಂ ಸಿದ್ದರಾಮಯ್ಯ
Photo : x/@siddaramaiah
ಬೆಂಗಳೂರು : ರಾಜ್ಯದಲ್ಲಿನ ಕುರಿಗಾಹಿಗಳ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದ್ದು, ವಲಸೆ ಕುರಿಗಾಹಿಗಳ ಮತ್ತು ಅವರ ಸ್ವತ್ತುಗಳ ಮೇಲಿನ ದೌರ್ಜನ್ಯ ತಡೆಯುವ ಕಾಯ್ದೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಲೆಮಾರಿ ಕುರಿಗಾಹಿ ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ ಅವರು, ಕುರಿಗಳಿಗೆ ಉಚಿತ ಲಸಿಕೆ ನೀಡಲೂ ಅಗತ್ಯ ಸೂಚನೆ ನೀಡಲಾಗುವುದು ಎಂದರು.
ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮಾತ್ರ ಮೇಯಿಸಲು ಅವಕಾಶ ನೀಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕುರಿಗಳು ಸತ್ತರೆ ಒಂದು ಕುರಿಗೆ 5 ಸಾವಿರ ರೂಪಾಯಿ ಪರಿಹಾರ ನೀಡುವ ಅನುಗ್ರಹ ಯೋಜನೆ ಜಾರಿಯಲ್ಲಿದೆ. ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗುವುದು. ಈ ಗುರುತಿನ ಚೀಟಿ ಆಧಾರದ ಮೇಲೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು. ಬಂದೂಕು ಪರವಾನಗಿ ನೀಡಲು ವ್ಯವಸ್ಥೆ, ಕುರಿಗಾಹಿಗಳ ಮಕ್ಕಳಿಗೆ ಸರಕಾರಿ ವಸತಿ ಶಾಲೆಗಳಲ್ಲಿ ಆದ್ಯತೆ ಮೇರೆಗೆ ಪ್ರವೇಶ ನೀಡುವ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು ಇವುಗಳಿಗೆ ಸರಕಾರಿ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.
ಪಶುಸಂಗೋಪನಾ ಇಲಾಖೆಯಲ್ಲಿ 1300 ವೈದ್ಯರ ಹುದ್ದೆ ಖಾಲಿ ಇದ್ದು, ಪ್ರಸಕ್ತ 400 ವೈದ್ಯರನ್ನು ನೇಮಕ ಮಾಡಲಾಗುತ್ತಿದೆ. ಮುಂದಿನ ವರ್ಷ ಬಾಕಿ ವೈದ್ಯರ ನೇಮಕಾತಿ ಮಾಡಲಾಗುವುದು. ಕುರಿಗಾರರು ಕ್ಯಾಂಪ್ ಮಾಡಿರುವ ಕಡೆಗಳಲ್ಲೇ ವೈದ್ಯರು ಬಂದು ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಕುರಿಗಾಹಿಗಳ ಕುರಿ ಕಳ್ಳತನವಾದರೆ ಕೂಡಲೇ ಪ್ರಕರಣ ದಾಖಲು ಮಾಡಬೇಕು, ಬಂಧಿಸಿ ತನಿಖೆ ಮಾಡಲು ಹಾಗೂ ರಕ್ಷಣೆ ನೀಡುವ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗುವುದು. ಹಿಂದಿನ ಸರಕಾರ ಸತ್ತ ಕುರಿಗಳಿಗೆ ನೀಡುವ ಅನುಗ್ರಹ ಯೋಜನೆಯನ್ನು ನಿಲ್ಲಿಸಿದ್ದು, ಈ ಕುರಿತು ಪರಿಹಾರ ನೀಡುವ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ವರದಿ ತರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಗೋಮಾಳಗಳನ್ನು ಯಾರಿಗೂ ಪರಭಾರೆ ಮಾಡಬಾರದೆಂದು ಈ ಹಿಂದೆ ನಮ್ಮ ಸರಕಾರದ ಅವಧಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಗೋಮಾಳಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಸಭೆಯಲ್ಲಿ ಪಶುಸಂಗೋಪನಾ ಸಚಿವ ವೆಂಕಟೇಶ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರಪ್ಪ ವರ್ತೂರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.