ಸಿ.ಟಿ. ರವಿ ಪದ ಬಳಕೆ ಬಗ್ಗೆ ಪರಿಶೀಲಿಸಿ ಕ್ರಮ: ಬಸವರಾಜ ಹೊರಟ್ಟಿ
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ಮಂಡ್ಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ.ರವಿ ಅವಹೇಳನಕಾರಿ ಪದ ಬಳಕೆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಶನಿವಾರ ಮದ್ದೂರಿನ ಸೋಮನಹಳ್ಳಿಯಲ್ಲಿ ದಿವಂಗತ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಪುಣ್ಯತಿಥಿ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಮಿತಿ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲು ಇನ್ನೂ ದಾರಿ ಇದೆ ಎಂದರು.
ರವಿ ಅವರ ಪದ ಬಳಕೆ ಬಗ್ಗೆ ಸದನಕ್ಕೆ ಸಂಬಂಧಿಸಿದ ಚಾನಲ್ಗಳಲ್ಲಿ ಮಾಹಿತಿ ಇಲ್ಲ. ಆದರೆ, ಇತರೆ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವರದಿ ಬರುತ್ತಿದೆ. ಇನ್ನೂ ಕಾಲಮಿಂಚಿಲ್ಲ, ಅದನ್ನು ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸದನದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಈ ಬಗ್ಗೆ ನೈತಿಕ ಸಮಿತಿ ಸಂಪೂರ್ಣ ಪರಿಶೀಲಿಸಿ ವರದಿ ಕೊಡುತ್ತದೆ. ಆ ವರದಿ ಆಧಾರದ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸದನದ ಸದಸ್ಯರನ್ನು ಬಂಧಿಸಬೇಕಾದರೆ ಸಭಾಪತಿ ಅನುಮತಿ ಪಡೆಯಬೇಕೆನ್ನುವ ನಿಯಮ ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ ಇತ್ತು. ಆದರೆ, ಈಗ ಇಲ್ಲ. ಸಿ.ಟಿ.ರವಿ ಅವರ ಬಂಧನದ ಬಗ್ಗೆ ಪೊಲೀಸರು ತನಗೆ ಮಾಹಿತಿ ನೀಡಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಎಸ್.ಎಂ.ಕೃಷ್ಣ ಅವರು ನನ್ನ ಜತೆ ಆತ್ಮೀಯವಾಗಿದ್ದರು. ಅವರಿಂದ ಬಹಳಷ್ಟು ಮಾರ್ಗದರ್ಶನ ಪಡೆದಿದ್ದೇನೆ. ಶ್ರೇಷ್ಠವಾದ ಸಭಾಧ್ಯಕ್ಷರಾಗಿದ್ದರು, ಮುಖ್ಯಮಂತ್ರಿ ಆಗಿದ್ದರು. ಇಂತಹ ವ್ಯಕ್ತಿ ಜಗತ್ತಿಗೇ ಮಾದರಿ. ಈಗಿನ ರಾಜಕಾರಣಿಗಳು ಕೃಷ್ಣ ಅವರ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ಸ್ಮರಿಸಿದರು.