ಅತ್ತಿಬೆಲೆ ಪಟಾಕಿ ದುರಂತ | ಗೋದಾಮು ಮಾಲಕರ ಮೇಲೆ ಕ್ರಮ: ಸಿಎಂ ಸಿದ್ದರಾಮಯ್ಯ
ಮೈಸೂರು, ಅ.8: ಬೆಂಗಳೂರಿನ ಆನೇಕಲ್ ತಾಲೂಕು ಅತ್ತಿಬೆಲೆಯಲ್ಲಿ ಪಟಾಕಿ ಗೋಡೌನ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 14 ಮಂದಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ರಾಮಕೃಷ್ಣನಗರದಲ್ಲಿರುವ ಅವರ ನಿವಾಸದರಲ್ಲಿ ರವಿವಾರ ಅತ್ತಿಬೆಲೆಗೆ ತರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಅತ್ತಿಬೆಲೆಗೆ ನಾನು ಈಗ ತೆರಳುತಿದ್ದು, ಅಲ್ಲಿಗೆ ಹೋದ ನಂತರ ಹೆಚ್ಚಿನ ಮಾಹಿತಿ ಪಡೆಯಲಿದ್ದೇನೆ. ಪಟಾಕಿ ಗೋಡೌನ್ ಗೆ ಪರವಾನಿಗೆ ನೀಡಲಾಗಿತ್ತೆ ಇಲ್ಲವೊ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಲೈಸೆನ್ಸ್ ಪಡೆದಿದ್ದರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಎಂಬುದನ್ಮು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಗೋಡೌನ್ ಮಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಬರ ಅಧ್ಯಯನಕ್ಕೆ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ತಂಡ ಸರಿಯಾಗಿ ಪರಿಶೀಲಿಸುತ್ತಿಲ್ಲ ಎಂದು ರೈತರು ಅರೋಪಿಸುತ್ತಿದ್ದಾರೆ ಎಂಬ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಕೂಡ ಬರ ಅಧ್ಯಯನ ತಂಡಕ್ಕೆ ಸೂಕ್ತ ರೀತಿಯಲ್ಲಿ ಪರಿಶೀಲಿಸುವಂತೆ ಹೇಳಿದ್ದೇನೆ. ಅವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.