ಆಸ್ಪತ್ರೆಗಳಲ್ಲಿ ಔಷಧವಿದ್ದರೂ ಹೊರಗಡೆ ಚೀಟಿ ಬರೆದುಕೊಡುವ ವೈದ್ಯಕೀಯ ಸಿಬ್ಬಂದಿ ವಿರುದ್ಧ ಕ್ರಮ: ಸಚಿವ ದಿನೇಶ್ ಗುಂಡೂರಾವ್
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ‘ಸರಕಾರಿ ಆಸ್ಪತ್ರೆಗಳ ಸುತ್ತಲಿರುವ ಫಾರ್ಮಸಿಗಳ ಹಾವಳಿಯನ್ನು ಹೋಗಲಾಡಿಸುವ ಪ್ರಯತ್ನದಲ್ಲಿದ್ದೇವೆ. ಆಸ್ಪತ್ರೆಗಳಲ್ಲಿ ಔಷಧವಿದ್ದರೂ ಹೊರಗಡೆ ಅಂಗಡಿಗಳಿಗೆ ಚೀಟಿ ಬರೆದುಕೊಡುವ ವೈದ್ಯಕೀಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, "ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳನ್ನು ವಿತರಿಸದೆ ಖಾಸಗಿ ಫಾರ್ಮಸಿಗಳಿಗೆ ಕಳುಹಿಸುವ ವೈದ್ಯಕೀಯ ಸಿಬ್ಬಂದಿ ವಿರುದ್ದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಸಾರ್ವಜನಿಕರಿಗೆ ಉಚಿತ ಔಷಧಿಗಳು ಸಿಗಬೇಕು ಎಂಬುದು ನಮ್ಮ ಸರಕಾರದ ಮೂಲ ಉದ್ದೇಶ" ಎಂದು ಹೇಳಿದ್ದಾರೆ.
ಈ ಹಿಂದೆ ಟೆಂಡರ್, ಸರಬರಾಜುಗಳಲ್ಲಿ ಆಗುತ್ತಿದ್ದ ಅಡಚಣೆಗಳನ್ನು ನಿವಾರಿಸಲಾಗಿದ್ದು, ಈಗಾಗಲೇ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಶೇ.70ರಿಂದ 80 ರಷ್ಟು ಅವಶ್ಯಕ ಔಷಧಿಗಳು ದೊರೆಯುತ್ತಿವೆ. ಇದನ್ನು ನೂರರಷ್ಟು ಮಾಡುವ ಪ್ರಯತ್ನದಲ್ಲಿದೆ ನಮ್ಮ ಸರಕಾರ. ಈ ಹಿಂದೆ 257ರಿಂದ 300ರಷ್ಟಿದ್ದ ಅವಶ್ಯಕ ಔಷಧಿಗಳ ಪಟ್ಟಿಗೆ ಹೊಸದಾಗಿ ಸಾವಿರಕ್ಕೂ ಹೆಚ್ಚು ಔಷಧಿಗಳನ್ನು ಸೇರಿಸಿದ್ದು, ಎಲ್ಲವೂ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗಲಿವೆ ಎಂದು ಹೇಳಿದ್ದಾರೆ.
‘ಆಸ್ಪತ್ರೆಗೆ ಬಂದ ರೋಗಿಗಳಿಗೆ ಔಷದಿಗಳು ಇಲ್ಲ ಎನ್ನುವ ಉತ್ತರ ಸಿಗಬಾರದು’. ನಮ್ಮ ಮೂಲ ಉದ್ದೇಶವೆ ಜನರಿಗೆ ಉಚಿತ ಆರೋಗ್ಯ ಸೇವೆ ಸಿಗಬೇಕು ಎಂಬುದು. ಇದೆ ಕಾರಣಕ್ಕೆ ನಮ್ಮ ಸರಕಾರ ‘ಗೃಹ ಆರೋಗ್ಯ’ ಎಂಬ ವಿಶೇಷ ಯೋಜನೆ ಜಾರಿಗೊಳಿಸಿದ್ದು, ಜನರನ್ನು ಕಾಡುತ್ತಿರುವ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಮನೆ ಬಾಗಿಲಿಗೆ ಉಚಿತ ಔಷಧಿ ಸರಬರಾಜು ಮಾಡುತ್ತಿದ್ದೇವೆ. ಇದು ನಮ್ಮ ಬದ್ಧತೆ’ ಎಂದು ಅವರು ಪ್ರಕಟಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳನ್ನು ವಿತರಿಸದೆ ಖಾಸಗಿ ಫಾರ್ಮಸಿಗಳಿಗೆ ಕಳುಹಿಸುವ ವೈದ್ಯಕೀಯ ಸಿಬ್ಬಂದಿ ಕುರಿತ ಇಂದಿನ @Vijaykarnataka ಪತ್ರಿಕೆಯ ಸಂಪಾದಕಿಯ ನನ್ನ ಗಮನ ಸೆಳೆದಿದೆ. ಈ ಸಮಸ್ಯೆ ಬಗ್ಗೆ ಈಗಾಗಲೇ ನಮ್ಮ ಸರ್ಕಾರ ಗಮನ ಹರಿಸಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 5, 2024
ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ… pic.twitter.com/frEljwvmBt