ಡೆಂಗಿ ಉಲ್ಬಣಗೊಂಡರೆ ಅಧಿಕಾರಿಗಳ ವಿರುದ್ಧ ಕ್ರಮ: ಸಿದ್ದರಾಮಯ್ಯ
ಬೆಂಗಳೂರು: ಡೆಂಗಿ ಜ್ವರ ಪ್ರಕರಣಗಳು ಉಲ್ಪಣಗೊಳ್ಳದಂತೆ ಕ್ರಮವಹಿಸಬೇಕು. ಜತೆಗೆ ಕಲುಷಿತ ನೀರಿನಿಂದ ಸಾವು-ನೋವುಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲುಷಿತ ನೀರು ಕುಡಿದು ಹಲವು ಸಾವು- ನೋವುಗಳು ಸಂಭವಿಸಿವೆ. ಇಂತಹ ಪ್ರಕರಣಗಳು ಮರುಕಳಿಸಿದರೆ, ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಲ್ಲ ಜಿಲ್ಲೆಗಳಲ್ಲಿ ಆದಷ್ಟು ಬೇಗನೆ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಬೇಕು. 55 ಕಡೆಗಳಲ್ಲಿ ಘನತ್ಯಾಜ್ಯ ಘಟಕಗಳ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕಾರ್ಯಾರಂಭಿಸುವ ಮೂಲಕ ಕೊಳಚೆ ನೀರು ನೇರವಾಗಿ ಕೆರೆಗಳಿಗೆ ಸೇರುವುದನ್ನು ತಪ್ಪಿಸಬೇಕು. ಮೈಸೂರಿನ ದಳವಾಯಿ ಕೆರೆಗೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಅವರು ಸೂಚಿಸಿದರು.
ರಾಜ್ಯದಲ್ಲಿ ಶೇ.80ರಷ್ಟು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಆದರೆ, ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಿದ್ದೇವೆ. ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡು ಒದಗಿಸಬೇಕು ಎಂದು ಸೂಚಿಸಿದರು.
ಕಲಬುರಗಿಯಲ್ಲಿ ಜನಸ್ಪಂದನ:ಜನಸ್ಪಂದನ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಲ್ಲಿ ಆರಂಭಿಸಬೇಕು. ಅಧಿವೇಶನದ ಮುಗಿದ ಬಳಿಕ ಜಿಲ್ಲಾ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಪ್ಪದೇ ಜನಸ್ಪಂದನಾ ಸಭೆಗಳನ್ನು ಮಾಡಬೇಕು. ಜಿಲ್ಲಾಧಿಕಾರಿಗಳು ಸ್ವೀಕರಿಸುವ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಬೇಕು ಎಂದು ಅವರು ತಿಳಿಸಿದರು.
ಇನ್ನೂ, 40702 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, 8ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ತಕ್ಷಣ ವಿಲೇವಾರಿ ಮಾಡಿ. ಅಲ್ಲದೆ, ಕಲಬುರ್ಗಿಯಲ್ಲಿ ಮುಂದಿನ ತಿಂಗಳು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದ ಅವರು, ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಫಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಬೇಕು. ರಾಜ್ಯದಲ್ಲಿ 84,52317 ಕುಟುಂಬಗಳ ಸುಮಾರು 5 ಕೋಟಿ ಜನರ ಸಮೀಕ್ಷೆ ನಡೆಸಬೇಕಾಗಿದೆ ಎಂದು ಉಲ್ಲೇಖಿಸಿದರು.
ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಯೋಜನೆ ರೂಪಿಸಬೇಕು. ಈಗಾಗಲೇ ಅಂತಹ ಶುದ್ಧ ನೀರು ಘಟಕಗಳ ಪರಿಶೀಲನೆ ನಡೆಸಲಾಗಿದ್ದು, ಸಮರ್ಪಕ ಯೋಜನೆ ರೂಪಿಸಿ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ, ರಾಜ್ಯದಲ್ಲಿ 4.34 ಲಕ್ಷ ಶೌಚಾಲಯಗಳ ಪೈಕಿ 98 ಸಾವಿರ ಶೌಚಾಲಯಗಳು ಪೂರ್ಣಗೊಂಡಿವೆ. ಇನ್ನೂ 2.86 ಲಕ್ಷ ಶೌಚಾಲಯಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಬೇಕಾಗಿದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದರು.
ರಾಜ್ಯದಲ್ಲಿ ಒಟ್ಟು 40,998 ಕೆರೆಗಳಿದ್ದು, ಇವುಗಳ ಪೈಕಿ 28,751 ಕೆರೆಗಳ ಅಳತೆ ಕಾರ್ಯ ಪೂರ್ಣಗೊಳಿಸಲಾಗಿದೆ. 10,931 ಕೆರೆಗಳಲ್ಲಿ ಒತ್ತುವರಿಯನ್ನು ಗುರುತಿಸಲಾಗಿದ್ದು, 6,065 ಕೆರೆಗಳ ಒತ್ತುವರಿ ತೆರವು ಪೂರ್ಣಗೊಳಿಸಲಾಗಿದೆ. ಇನ್ನೂ 4,787 ಕೆರೆಗಳ ಒತ್ತುವರಿ ತೆರವಿಗೆ ಬಾಕಿಯಿದ್ದು, ಆದಷ್ಟು ಬೇಗನೆ ಅಳತೆ ಕಾರ್ಯ ಪೂರ್ಣಗೊಳಿಸಿ ತೆರವು ಕಾರ್ಯ ಪೂರ್ಣಗೊಳಿಸಬೇಕು. ಪದೇ ಪದೇ ಕೆರೆಗಳ ಒತ್ತುವರಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು.