ಸರ್ವಾಧಿಕಾರವನ್ನೂ ಮೀರಿದ ಕ್ರಮ: 141 ಸಂಸದರ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು: ಲೋಕಸಭೆಯಲ್ಲಿ ಸಂಸತ್ ದಾಳಿ ಸಂಬಂಧ ಚರ್ಚೆಗೆ ಆಗ್ರಹಿಸಿದ ಸಂಸದರ ಅಮಾನತು ಕ್ರಮ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, " ಇಷ್ಟು ಮಂದಿ ಸಂಸದರನ್ನು ಅಮಾನತು ಮಾಡಿರುವುದು ಸರ್ವಾಧಿಕಾರವನ್ನೂ ಮೀರಿದ ಕ್ರಮ. ಇದನ್ನು ಪ್ರಜಾಪ್ರಭುತ್ವ ಅಂತ ಕರೆಯಲು ಸಾಧ್ಯವಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ʼಎಕ್ಸ್ʼ ನಲ್ಲಿ ಬರೆದುಕೊಂಡಿರುವ ಅವರು, ʼ141 ಸಂಸದರನ್ನು ಒಂದೇ ಬಾರಿಗೆ ಅಮಾನತು ಮಾಡಿದ ಉದಾಹರಣೆ ಸಂಸತ್ತಿನ ಇತಿಹಾಸದಲ್ಲೇ ಇಲ್ಲ. ಇಷ್ಟು ಮಂದಿ ಸಂಸದರನ್ನು ಅಮಾನತು ಮಾಡಿರುವುದು ಸರ್ವಾಧಿಕಾರವನ್ನೂ ಮೀರಿದ ಕ್ರಮ. ಇದನ್ನು ಪ್ರಜಾಪ್ರಭುತ್ವ ಅಂತ ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ʼಚರ್ಚೆ ಪ್ರಜಾಪ್ರಭುತ್ವದ ಮೂಲ. ಒಳ್ಳೆಯ ಸರ್ಕಾರ, ಬಲಿಷ್ಠ ವಿರೋಧ ಪಕ್ಷ ಇದ್ದಾಗ ಮಾತ್ರ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ. ಸಂಸತ್ತಿನಲ್ಲಿ ಸರ್ಕಾರದ ತಪ್ಪುಗಳನ್ನು ವ್ಯಕ್ತಪಡಿಸುವ ಆರೋಗ್ಯ ಪೂರ್ಣ ವಾತಾವರಣ ಇರಬೇಕು. ಬಿಜೆಪಿಯ ಪಕ್ಷದ ಎಂಪಿ ಗಳನ್ನು ಮಾತ್ರ ಇಟ್ಟುಕೊಂಡು ಸಂಸತ್ ಅಧಿವೇಶನ ನಡೆಸುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ.