ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನಿರಾಕರಿಸಿದರೆ ಕ್ರಮ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು: ಸರಕಾರದಿಂದ ರಿಯಾಯಿತಿ, ಪ್ರೋತ್ಸಾಹ ಧನ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯಮಗಳನ್ನು ಸ್ಥಾಪಿಸಿ, ನಂತರ ಸ್ಥಳೀಯರಿಗೆ ಉದ್ಯೋಗ ನೀಡಲು ಅಸಡ್ಡೆ ತೋರಿದರೆ ಅಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಸಮೃದ್ಧಿ ವಿ.ಮಂಜುನಾಥ್, ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.
ಉದ್ಯಮಗಳನ್ನು ಸ್ಥಾಪಿಸಲು ರಾಜ್ಯ ಸರಕಾರದಿಂದ ರಿಯಾಯಿತಿ ಪಡೆದವರು, ಭೂಮಿ ಕಳೆದುಕೊಂಡ ಸ್ಥಳೀಯರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಕಡ್ಡಾಯವಾಗಿ ಉದ್ಯೋಗಾವಕಾಶವನ್ನು ನೀಡಲೇಬೇಕು. ಒಂದು ವೇಳೆ ಯಾರಾದರೂ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಅವರಿಗೆ ಸರಕಾರದಿಂದ ನೀಡುವ ರಿಯಾಯಿತಿಯನ್ನು ಹಿಂಪಡೆಯುವುದಲ್ಲದೆ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಮದ್ಯಪ್ರವೇಶಿಸಿದ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್, ನನ್ನ ಕ್ಷೇತ್ರದಲ್ಲಿ ಇನ್ಫೋಸಿಸ್ ಸಂಸ್ಥೆಯವರು 58 ಎಕರೆ ಜಾಗವನ್ನು ಪಡೆದುಕೊಂಡು ಅಲ್ಲಿ ಘಟಕ ಸ್ಥಾಪನೆ ಮಾಡದೆ, ಗಿಡಗಳನ್ನು ನೆಟ್ಟು ತೋಟ ಮಾಡಿದ್ದಾರೆ. ಕೋಟ್ಯಂತರ ಬೆಲೆಬಾಳುವ ಭೂಮಿಯನ್ನು ರೈತರು ಎಕರೆಗೆ 35 ಲಕ್ಷ ರೂ.ಗಳಂತೆ ಸರಕಾರಕ್ಕೆ ನೀಡಿದ್ದರು. ಒಂದೇ ಒಂದು ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದರು.
ಮಾತಿನಲ್ಲಿ ಮಾತ್ರ ಆಚಾರಗಳನ್ನು ಹೇಳುತ್ತಾರೆ. ಆದರೆ, ಭೂಮಿ ಕಳೆದುಕೊಂಡ ರೈತರ ಕುಟುಂಬದವರಿಗೆ ಮಾತ್ರ ಉದ್ಯೋಗ ಇಲ್ಲ. ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ನವರು ತಮ್ಮ ಘಟಕವನ್ನು ಸ್ಥಾಪನೆ ಮಾಡುತ್ತಾರೆ ಎಂದು ಹೇಳಿ, ರೈತರಿಂದ ಜಮೀನು ಕೊಡಿಸುವಲ್ಲಿ ಮುಂಚೂಣಿಯಲ್ಲಿದ್ದ ನಾನು, ಈಗ ಅವರ ಕಣ್ಣಲ್ಲಿ ಕಣ್ಣಿಟ್ಟು ಎದುರು ನಿಂತು ಮಾತನಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಇನ್ಫೋಸಿಸ್ ಸಂಸ್ಥೆಯವರಿಂದಲೂ ಜಮೀನು ವಾಪಸ್ ಪಡೆಯುತ್ತದೆಯೇ? ಇದೇ ರೀತಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದವರಿಗೆ ಭೂಮಿ ನೀಡಲಾಗಿತ್ತು. ಅವರು ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ ಎಂದು ಅರವಿಂದ ಬೆಲ್ಲದ್ ಹೇಳಿದರು.