ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಬೆಂಬಲಿಸುವ ಪೊಲೀಸರ ವಿರುದ್ಧ ಕ್ರಮ ಅಗತ್ಯ : ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ಮೈಕ್ರೊ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕೆ ಆರ್‌ಬಿಐ ನಿಯಮಗಳಿವೆ. ಸುಗ್ರೀವಾಜ್ಞೆ ಬಹಳಷ್ಟಿವೆ. ಆದರೆ, ಅವುಗಳನ್ನು ಜಾರಿಗೆ ತರುವ ಕೆಲಸ ಆಗಬೇಕು. ಪೊಲಿಸರು ಕಳ್ಳರ ಜೊತೆ ಸೇರಿದರೆ ಹೇಗೆ ನಿಯಂತ್ರಣ ಆಗುತ್ತದೆ. ಮೈಕ್ರೊ ಫೈನಾನ್ಸ್ ಸಂಸ್ಥೆಗಳನ್ನು ಪೊಲೀಸರು ಬೆಂಬಲಿಸುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ದೂರಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವರ್ಗಾವಣೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ. ಹಣ ಕೊಟ್ಟು ಬಂದ ಅಧಿಕಾರಿ ತನ್ನ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಒಂದು. ಬಡವರು ಪೊಲಿಸರಿಗೆ ಏನೂ ಕೊಡುವುದಿಲ್ಲ. ಮೈಕೋ ಫೈನಾನ್ಸ್ ಮಾಲಕರೇ ಹಣ ಕೊಡುವುದು. ಅದನ್ನು ಮೊದಲು ನಿಯಂತ್ರಣ ಮಾಡಲಿ ಎಂದು ಸಲಹೆ ನೀಡಿದರು.
ತಮ್ಮ ಹುಳುಕನ್ನು ಮುಚ್ಚಿಟ್ಟುಕೊಂಡು ಮೈಕ್ರೊ ಫೈನಾನ್ಸಿಗೆ ಬೆಂಬಲಕೊಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಕೇವಲ ಸಭೆ ಮಾಡಿ, ಸುಗ್ರೀವಾಜ್ಞೆ ಮಾಡುವುದರಿಂದ ಏನೂ ಆಗುವುದಿಲ್ಲ. ಏನಾದರೂ ಸಮಸ್ಯೆ ಬಂದರೆ ಸಭೆ ಮಾಡುವ ಚಾಳಿ ಮುಖ್ಯಮಂತ್ರಿಗೆ ಇದೆ. ಅದರಿಂದ ಏನೂ ಪರಿಹಾರ ಆಗುವುದಿಲ್ಲ. ಸಿಎಂ ಕೂಡಲೇ ಅನುಷ್ಠಾನಕ್ಕೆ ಇಳಿಯಬೇಕು ಎಂದು ಅವರು ಆಗ್ರಹಿಸಿದರು.
ಅಂಬೇಡ್ಕರ್ ಕಾರಣ: ಭಾರತದಲ್ಲಿ ಪ್ರಜಾಪಭುತ್ವ ಗಟ್ಟಿಯಾಗಿ ಉಳಿಯಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ. ನಮಗೆ ಸ್ವಾತಂತ್ರೋತ್ಸವ ಎಷ್ಟು ಮುಖ್ಯವೋ ಗಣರಾಜ್ಯೋತ್ಸವವೂ ಅಷ್ಟೇ ಮುಖ್ಯ. ನಮ್ಮಷ್ಟಕ್ಕೆ ನಾವೇ ಗಣರಾಜ್ಯವನ್ನು ಒಪ್ಪಿಕೊಂಡಿದ್ದೇವೆ. ಡಾ.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ನಮಗೆಲ್ಲ ಮಾರ್ಗದರ್ಶನ ಮಾಡುತ್ತಿದೆ ಎಂದರು.