ಸಾಮರಸ್ಯದ ವಾತಾವರಣ ನಿರ್ಮಿಸಲು ಕ್ರಮ: ಸಿಎಂ ಸಿದ್ದರಾಮಯ್ಯ
ಗೃಹ ಇಲಾಖೆ ಅಡಿಯಲ್ಲಿ ಮಹತ್ವದ ಯೋಜನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.7: ‘ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹರಡುವ, ಸೌಹಾರ್ದ ಕೆಡಿಸುವ ಕೋಮು ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಸಮಾಜದಲ್ಲಿ ಹದಗೆಟ್ಟಿದ್ದ ಸಾಮರಸ್ಯದ ವಾತಾವರಣವನ್ನು ಮರುಸ್ಥಾಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಆಯವ್ಯಯ ಮಂಡಿಸಿದ ಅವರು, ‘ಪೊಲೀಸ್ ಸಿಬ್ಬಂದಿಗೆ ಸುಸಜ್ಜಿತ ವಸತಿ ಗೃಹವನ್ನು ಒದಗಿಸಲು ಪೊಲೀಸ್ ಗೃಹ-2025 ಯೋಜನೆಯಡಿ ಪ್ರಸಕ್ತ ವರ್ಷ 2,125 ವಸತಿಗೃಹ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ವರ್ಷ 450 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪೊಲೀಸ್ ಮೊಬಿಲಿಟಿ ಯೋಜನೆಯಡಿ ಇಲಾಖೆಯಲ್ಲಿನ ಹಳೆಯ ವಾಹನಗಳನ್ನು ಹಂತ ಹಂತವಾಗಿ ಬದಲಾಯಿಸಲು 2023-24ನೆ ಸಾಲಿನಲ್ಲಿ 100 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದರು.
ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವುದು ಸರಕಾರದ ಆದ್ಯತೆಯಾಗಿದ್ದು, ಪೆÇಲೀಸ್ ಠಾಣೆ ಮತ್ತು ಕಛೇರಿ ಕಟ್ಟಡಗಳು, ಎಂ.ಟಿ. ಶೆಡ್, ಶಸ್ತ್ರಾಗಾರ ಮುಂತಾದ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಮೀಸಲಿಟ್ಟಿದೆ ಎಂದರು.
ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಹೊಸದಾಗಿ ಐದು ಸಂಚಾರ ಪೊಲೀಸ್ ಠಾಣೆಗಳನ್ನು ಮತ್ತು ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆಗಳನ್ನು ಮತ್ತು ಕಛೇರಿಗಳನ್ನು ಬಲಪಡಿಸಲು ಎರಡು ಹಂತಗಳಲ್ಲಿ ಒಟ್ಟು 2,454 ಹುದ್ದೆಗಳನ್ನು ಸೃಜಿಸುವುದಾಗಿ ಘೋಷಣೆ ಮಾಡಲಾಗಿದೆ.
ಅಪರಾಧಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಪರಾಧ ತನಿಖಾ ವಿಭಾಗ, ಸೈಬರ್ ಅಪರಾಧ ಘಟಕ ಮತ್ತು ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ ಪೊಲೀಸ್ ಠಾಣೆಗಳ ಘಟಕಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗಿದೆ. ಇಲಾಖೆಯ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ತರಬೇತಿ ಶಾಲೆಗಳನ್ನು ಬಲಗೊಳಿಸಲು 20 ಕೋಟಿ ರೂ.ಗಳು ಮೀಸಲಿಡಲಾಗಿದೆ.
ಬೆಂಗಳೂರು ಕೇಂದ್ರ ಕಾರಾಗೃಹದ ಮಾದರಿಯಲ್ಲಿ ರಾಜ್ಯದ ಇತರೆ ಏಳು ಕೇಂದ್ರ ಕಾರಾಗೃಹಗಳಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾರ್ಯವನ್ನು ಹಾಗೂ ಐದು ಕೇಂದ್ರ ಕಾರಾಗೃಹಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಭದ್ರತಾ ವಾಚ್ ಟವರ್ಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದಾಗಿ ಪ್ರಸಕ್ತ ಬಜೆಟ್ನಲ್ಲಿ ಘೋಷಿಸಿದೆ.
ಕಾರಾಗೃಹಗಳಲ್ಲಿನ ಬಂಧಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ವ್ಯವಸ್ಥೆಯನ್ನು ಬಲಪಡಿಸಲು ಮೂರು ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರಿಸನ್ಸ್ ಅಕಾಡೆಮಿಯನ್ನು ಪ್ರಸಕ್ತ ವರ್ಷದಲ್ಲಿ ಕಾರ್ಯಾರಂಭಗೊಳಿಸಲು ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳಲು ಐದು ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಡಿ 2023-24ನೆ ಸಾಲಿನಲ್ಲಿ ಕೆ-ಸೇಫ್ ಯೋಜನೆಯಡಿ ಸೂಪ, ಯಲಹಂಕ, ಭಟ್ಕಳ, ಅರಕೇರಾ, ನಾಗರಬಾವಿ, ಎನ್.ಆರ್.ಪುರ, ಶಿರಹಟ್ಟಿ, ಹೊನ್ನಾವರ, ನರಸಾಪುರ ಕೈಗಾರಿಕಾ ಪ್ರದೇಶ ಮತ್ತು ದೇವನಹಳ್ಳಿ ಏರೋಸ್ಪೇಸ್ ಕೈಗಾರಿಕಾ ಪ್ರದೇಶಗಳಲ್ಲಿ 3 ಬೇ ಅಗ್ನಿಶಾಮಕ ಠಾಣಾ ಕಟ್ಟಡಗಳ ನಿರ್ಮಾಣವನ್ನು ಹಾಗೂ ಅಗತ್ಯವಿರುವ ಅಗ್ನಿಶಾಮಕ ವಾಹನಗಳನ್ನು 100 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.
ಅಗ್ನಿಶಮನ ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಹೈ ಪ್ರೆಶರ್ ವಾಟರ್ ಮಿಸ್ಟ್, ಪೋಮ್ ಕಾಂಪೌಂಡ್ ಮತ್ತು ಏರ್ ಬ್ಲೋವರ್ ಮುಂತಾದ ಯಂತ್ರೋಪಕರಣಗಳನ್ನು ಸಂಗ್ರಹಿಸಲು ಪ್ರಸಕ್ತ ವರ್ಷ ಮೂರು ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ಪ್ರಕಟಿಸಿದರು.