ಅನುದಾನಿತ ನೌಕರರಿಗೂ ಸಂಜೀವಿನಿ ಯೋಜನೆ ವಿಸ್ತರಿಸಲು ಕ್ರಮ: ಸಿಎಂ ಸಿದ್ದರಾಮಯ್ಯ
ಬೆಳಗಾವಿ: ರಾಜ್ಯ ಸರಕಾರಿ ನೌಕರರಿಗೆ ಒದಗಿಸಿರುವ ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ ನೌಕರರಿಗೂ ವಿಸ್ತರಣೆ ಮಾಡುವ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ ನೌಕರರಿಗೆ ಇಲ್ಲ.ಆದರೂ, ಆರ್ಥಿಕ ಲೆಕ್ಕಾಚಾರ ಹಾಕಿ ಅವರನ್ನು ಇದರ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ, ಯೂರಿನರಿ ಚಿಕಿತ್ಸೆಗಳು, ನವಜಾತ ಶಿಶು ಹಾಗೂ ಚಿಕ್ಕಮಕ್ಕಳ ಕಾಯಿಲೆ, ಸುಟ್ಟಗಾಯ ಮತ್ತು ಅಪಘಾತಗಳಿಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ವತಿಯಿಂದ ವರ್ಕ್ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಸಂಜೀವಿನಿ ಯೋಜನೆಯನ್ನು 2015ರಿಂದ ಜಾರಿಗೊಳಿಸಿತ್ತು ಎಂದರು.
ಈ ಯೋಜನೆಯನ್ನು ಸರಕಾರಿ ನೌಕರರಿಗೆ ಮಾತ್ರ ರೂಪಿಸಲಾಗಿದೆ. ಯಾವುದೇ ಅನುದಾನಿತ ನೌಕರರು ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ಈ ಸಂಬಂಧ ಪರಿಶೀಲನೆ ನಡೆಸಿ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.