ಮನೆ ಊಟಕ್ಕೆ ಅವಕಾಶ ಕೋರಿ ದರ್ಶನ್ ಅರ್ಜಿ: ಆಕ್ಷೇಪಣೆ ಸಲ್ಲಿಸಲು ಎಸ್‍ಐಟಿಗೆ ನ್ಯಾಯಾಲಯ ಸೂಚನೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‍ಗೆ ಮನೆ ಊಟ ತರಿಸಿಕೊಳ್ಳಲು ಕೋರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಆಕ್ಷೇಪಣೆ ಸಲ್ಲಿಸಲು ಎಸ್‍ಐಟಿಗೆ ನ್ಯಾಯಾಲಯ ಸೂಚನೆ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ 24ನೇ ಎಸಿಎಂಎಂ ನ್ಯಾಯಾಲಯವು ಈ ಸೂಚನೆ ನೀಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿ, ‘ಅರ್ಜಿದಾರರಿಗೆ ಊಟದಲ್ಲಿ ವಿಷಕಾರಿ ಸೂಕ್ಷ್ಮಾಣು ಜೀವಿಗಳು ಸೇರ್ಪಡೆಯಾಗಿದ್ದು, ಮನೆಯಿಂದ ಊಟ ತರಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಊಟದಲ್ಲಿ ವಿಷಕಾರಿ ಸೂಕ್ಷ್ಮಾಣು ಜೀವಿಗಳು ಸೇರಿರುವ ಸಂಬಂಧ ಮೆಡಿಕಲ್ ವರದಿ ಬಂದಿದೆ. ಈ ವರದಿಯನ್ನು ನೋಡಿ ಅರ್ಜಿಯಲ್ಲಿ ಸೇರಿಸಬಹುದಾಗಿದೆ' ಎಂದು ಕೋರಿದರು.
ಎಸ್‍ಪಿಪಿ ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಸೋಮವಾರ ವೈದ್ಯಕೀಯ ವರದಿ ನಮ್ಮ ಕೈಗೆ ಸಿಗಲಿದೆ. ಅದರಂತೆ ಮಂಗಳವಾರ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ನ್ಯಾಯಾಧೀಶರು, ಈ ಪ್ರಕರಣದಲ್ಲಿ ಹೈಕೋರ್ಟ್ ನಿರ್ದೇಶನವಿದೆ. ಹೀಗಾಗಿ, ಪ್ರಕರಣವನ್ನು 27ನೇ ತಾರೀಕಿನೊಳಗೆ ಮುಕ್ತಾಯ ಮಾಡಬೇಕು. ಹೀಗಾಗಿ, ಮಂಗಳವಾರದವರೆಗೂ ಅವಕಾಶ ಸಾಧ್ಯವಿಲ್ಲ. ಸೋಮವಾರವೇ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.
ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ರಾಘವೇಂದ್ರ ಅವರ ತಾಯಿಯು ಚಿತ್ರದುರ್ಗದ ನಿವಾಸದಲ್ಲಿ ಮೃತಪಟ್ಟ ಹಿನ್ನೆಲೆ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನ್ಯಾಯಾಲಯ ಅವಕಾಶ ನೀಡಿದೆ. ಪ್ರಕರಣ ಸಂಬಂಧ ರಾಘವೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 24ನೇ ಎಸಿಎಂಎಂ ನ್ಯಾಯಾಲಯ ಈ ಆದೇಶ ನೀಡಿದೆ. ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲು ಸೂಚನೆ ನೀಡಲಾಗಿದೆ.